ಭ್ರಷ್ಟ ಈಶ್ವರಪ್ಪರ ಕಿರುಕುಳ, ಬೆದರಿಕೆಯೇ ಸಂತೋಷ್ ಆತ್ಮಹತ್ಯೆಗೆ ಕಾರಣ: ದಿನೇಶ್ ಗುಂಡೂರಾವ್ ಆರೋಪ

Prasthutha|

ಬೆಂಗಳೂರು: ಈಶ್ವರಪ್ಪ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಯ ಹಿಂದೆ ಈಶ್ವರಪ್ಪರ ನೇರ ಕೈವಾಡವಿದೆ. ಸಂತೋಷ ಪಾಟೀಲ್ ತಮ್ಮ ವಾಟ್ಸ್ಅಪ್ ಸಂದೇಶದಲ್ಲೂ ಈಶ್ವರಪ್ಪರೇ ತಮ್ಮ ಸಾವಿಗೆ ಕಾರಣ ಎಂದು ಬರೆದುಕೊಂಡಿದ್ದಾರೆ. ಸಂತೋಷ್ ಸಾವಿಗೆ ಕಾರಣರಾದ ಈಶ್ವರಪ್ಪರನ್ನು ಪೊಲೀಸರು ಸೆಕ್ಷನ್ 306 ರ ಅಡಿ ಕೂಡಲೇ ಬಂಧಿಸಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.

- Advertisement -


ಘಟನೆಗೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಅವರು, ಭ್ರಷ್ಟ ಈಶ್ವರಪ್ಪನವರ ಬಂಡವಾಳ ಬಯಲು ಮಾಡಿದಕ್ಕಾಗಿ ಗುತ್ತಿಗೆದಾರ ಸಂತೋಷ್ ಪ್ರಾಣ ಕಳೆದುಕೊಳ್ಳುವಂತಾಗಿದೆ. ಸಂತೋಷ್ ಪಾಟೀಲ ಈಶ್ವರಪ್ಪ ವಿರುದ್ಧ ಕಮೀಷನ್ ಆರೋಪ ಮಾಡಿದ್ದರೂ ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಭ್ರಷ್ಟ ಈಶ್ವರಪ್ಪರ ಕಿರುಕುಳ ಹಾಗೂ ಬೆದರಿಕೆಯೇ ಸಂತೋಷ ಪಾಟೀಲ ಆತ್ಮಹತ್ಯೆಗೆ ಕಾರಣ ಎಂದು ಅವರು ಆರೋಪಿಸಿದ್ದಾರೆ. ಗುತ್ತಿಗೆದಾರನ ಸಾವಿಗೆ ಕಾರಣರಾದ ಈಶ್ವರಪ್ಪರನ್ನು ಸಂಪುಟದಿಂದ ಈ ಕೂಡಲೇ ವಜಾ ಮಾಡಲಿ ಎಂದು ಸವಾಲೆಸೆದರು.

ಈಶ್ವರಪ್ಪ ಸಚಿವ ಸಂಪುಟದಲ್ಲಿರಲು ನೈತಿಕತೆಯೇ ಇಲ್ಲ. ಬೊಮ್ಮಾಯಿಯವರೆ ಕೋಲೆ ಬಸವಣ್ಣನ ರೀತಿ ತಲೆ ಆಡಿಸುವುದು ಬಿಡಿ, ಈಗಲಾದರೂ ದಿಟ್ಟ ಕ್ರಮ ತೆಗೆದುಕೊಳ್ಳಿ. ಈಶ್ವರಪ್ಪರನ್ನು ಕೆಳಗಿಳಿಸಿ ನಿಮ್ಮ ಸರ್ಕಾರಕ್ಕಿರೋ ಕಳಂಕ ಕಳಚಿಕೊಳ್ಳಿ ಎಂದು ಆಗ್ರಹಿಸಿದ್ದಾರೆ.

- Advertisement -

ಈಶ್ವರಪ್ಪರ ಭ್ರಷ್ಬಾಚಾರ ಬಯಲಿಗೆಳೆದ ಸಂತೋಷ್ ಪಾಟೀಲರ ಸಾವು ಅನೇಕ ಅನುಮಾನ ಹುಟ್ಟಿಸಿದೆ. ಆತ್ಮಹತ್ಯೆಯ ಬದಲು ಇಲ್ಲಿ ಕೊಲೆ ನಡೆದಿರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಪೊಲೀಸರು ಸಂತೋಷ್ ಪಾಟೀಲರ ಆತ್ಮಹತ್ಯೆ ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸಬೇಕು. ಈ ಸಾವಿನ ಹಿಂದಿರೋ ಈಶ್ವರಪ್ಪರ ಕೈವಾಡ ಬಯಲಾಗಲೇಬೇಕು ಎಂದು ಅವರು ಆಗ್ರಹಿಸಿದ್ದಾರೆ.

Join Whatsapp