ಥಾಣೆ: ನಗರದ ವಿವಿಯಾನ ಮಾಲ್’ನ ಮಲ್ಟಿಪ್ಲೆಕ್ಸ್’ನಲ್ಲಿ ಮರಾಠಿ ಸಿನಿಮಾ ಹರ್ ಹರ್ ಮಹಾದೇವ್ ಪ್ರದರ್ಶನದ ವೇಳೆ ದಾಂಧಲೆ ನಡೆಸಿದಕ್ಕಾಗಿ NCP ಮುಖಂಡ ಜಿತೇಂದ್ರ ಅವ್ಹಾದ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿ ಅವ್ಹಾದ್ ಮತ್ತು 100 ಮಂದಿ ಪಕ್ಷದ ಕಾರ್ಯಕರ್ತರ ವಿರುದ್ಧ ವರ್ತಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ವರ್ತಕ್ ನಗರ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್’ಪೆಕ್ಟರ್ ಸದಾಶಿವ ನಿಕಮ್, ಈ ಘಟನೆಗೆ ಸಂಬಂಧಿಸಿದ ನಮ್ಮ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ ಮತ್ತು ಜಿತೇಂದ್ರ ಅವ್ಹಾದ್, ಇತರ ಕೆಲವು ಬೆಂಬಲಿಗರಿಗೆ ನೋಟಿಸ್ ಜಾರಿಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಅವರನ್ನು ಬಂಧಿಸಿದ್ದೇವೆ ಮತ್ತು ತನಿಖೆಯ ಹಿತದೃಷ್ಟಿಯಿಂದ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಛತ್ರಪತಿ ಶಿವಾಜಿಯ ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸಿ ಸೋಮವಾರ ರಾತ್ರಿ ಮಾಜಿ ವಸತಿ ಸಚಿವ ಜಿತೇಂದ್ರ ಅವ್ಹಾದ್ ಅವರು ಹರ್ ಹರ್ ಮಹಾದೇವ್ ಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸಿದ್ದರು. ಎನ್.ಸಿ.ಪಿ ಮುಖಂಡರ ವಿರುದ್ಧ ಐಪಿಸಿ ಸೆಕ್ಷನ್ 141, 143, 146, 149, 323, 504 ಮತ್ತು ಮುಂಬೈ ಪೊಲೀಸ್ ಕಾಯ್ದೆಯ ಸೆಕ್ಷನ್ 37 ಮತ್ತು 135ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು