ಮುಂಬೈ: ಹನುಮಾನ್ ಚಾಲಿಸಾ ಪಠಣಕ್ಕೆ ಕರೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ರಾಣಾ ದಂಪತಿ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿ ಆದೇಶ ನೀಡಿದೆ.
ಪೊಲೀಸ್ ಅಧಿಕಾರಿಗೆ ಕರ್ತವ್ಯ ನಿರ್ವಹಿಸದಂತೆ ತಡೆದ ಆರೋಪದಲ್ಲಿ ಮುಂಬೈ ಪೊಲೀಸರು ರಾಣಾ ದಂಪತಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದನ್ನು ರದ್ದುಗೊಳಿಸುವಂತೆ ಕೋರಿ ರಾಣಾ ದಂಪತಿ ಬಾಂಬೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ರಾಣಾ ದಂಪತಿ ಸಲ್ಲಿಸಿದ್ದ ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಪಿ.ಬಿ. ವರಾಲೆ, ಎಸ್. ಎಂ. ಮೋದಕ್ ಅವರ ಪೀಠ ವಜಾಗೊಳಿಸಿದೆ.
ಎರಡು ವಿಭಿನ್ನ ಧರ್ಮಗಳ ನಡುವೆ ದ್ವೇಷವನ್ನು ಹುಟ್ಟುಹಾಕುವ ಆರೋಪಕ್ಕೆ ಸಂಬಂಧಿಸಿದಂತೆ ಏಪ್ರಿಲ್ 23 ರಂದು ರಾಣಾ ದಂಪತಿ ವಿರುದ್ಧ ಪೊಲೀಸರು ದೇಶ ದ್ರೋಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಮಾತ್ರವಲ್ಲ ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿ ತನ್ನ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಏಪ್ರಿಲ್ 24ರಂದು ಐಪಿಸಿ ಸೆಕ್ಷನ್ 353 ರ ಅಡಿಯಲ್ಲಿ ಎರಡನೇ ಪ್ರಕರಣ ದಾಖಲಿಸಲಾಗಿತ್ತು.