ದೆಹಲಿ, ಆ.4: ಬಾಲಿವುಡ್ ಗಾಯಕ ಯೋ, ಯೋ ಹನಿಸಿಂಗ್ ವಿರುದ್ಧ ಅವರ ಪತ್ನಿ ಶಾಲಿನಿ ತಲ್ವಾರ್ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ.
ದೆಹಲಿಯ ತಿಸ್ ಹಜಾರಿ ನ್ಯಾಯಾಲಯದಲ್ಲಿ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಶಾಲಿನಿ ಪರ ವಕೀಲರಾದ ಸಂದೀಪ್ ಕಪೂರ್ ತಿಳಿಸಿದ್ದಾರೆ.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಹನಿಸಿಂಗ್ ಅವರಿಗೆ ಆಗಸ್ಟ್ 28ರ ಒಳಗಾಗಿ ಉತ್ತರ ನೀಡುವಂತೆ ಸೂಚಿಸಿದ್ದಾರೆ.
2011ರಲ್ಲಿ ಹನಿ ಸಿಂಗ್ ಮತ್ತು ಶಾಲಿನಿ ತಲ್ವಾರ್ ಮದುವೆ ನೆರವೇರಿತ್ತು. ಹತ್ತು ವರ್ಷಗಳ ಕಾಲ ಹನಿ ಸಿಂಗ್ ಜೊತೆ ದಾಂಪತ್ಯ ಜೀವನ ನಡೆಸಿರುವ ಶಾಲಿನಿ ಅನೇಕ ಹಿಂಸೆ ಅನುಭವಿಸಿದ್ದಾರೆ. ಕೋರ್ಟ್ಗೆ ಸಲ್ಲಿಸಿದ ದೂರಿನಲ್ಲಿ ಅವರು ಎಲ್ಲವನ್ನೂ ವಿವರಿಸಿದ್ದಾರೆ.
ಒಂದು ಕಾಲದಲ್ಲಿ ಬಹುಬೇಡಿಕೆಯ ಗಾಯಕನಾಗಿದ್ದ ಹನಿ ಸಿಂಗ್ ಗೆ ವಿವಾದಗಳು ಹೊಸದೇನಲ್ಲ. ಆದರೆ ಈ ಬಾರಿ ಅವರ ಪತ್ನಿ ಕೋರ್ಟ್ ಮೆಟ್ಟಿಲು ಏರಿರುವುದರಿಂದ ಅದು ಗಂಭೀರ ಸ್ವರೂಪ ಪಡೆದುಕೊಂಡಿದೆ.