ಹಾನಗಲ್‌ ಪ್ರಕರಣ: ಇನ್‌ಸ್ಪೆಕ್ಟರ್‌, ಕಾನ್‌‌ಸ್ಟೇಬಲ್ ಅಮಾನತು

Prasthutha|

ಹಾವೇರಿ: ಹಾನಗಲ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸ್ಥಳೀಯ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಶ್ರೀಧರ್‌ ಎಸ್‌.ಆರ್‌. ಮತ್ತು ಕಾನ್‌ಸ್ಟೆಬಲ್‌ ಇಲಿಯಾಸ್ ಶೇತಸನದಿ ಅವರನ್ನು ಎಸ್ಪಿ ಅಂಶುಕುಮಾರ್‌ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಕರ್ತವ್ಯಲೋಪ ಮತ್ತು ವಿಳಂಬ ಧೋರಣೆ ತೋರಿದ ಆರೋಪದ ಮೇಲೆ ಈ ಕ್ರಮಕೈಗೊಳ್ಳಲಾಗಿದೆ.

- Advertisement -

ಹಾನಗಲ್‌ ತಾಲ್ಲೂಕಿನ ನಾಲ್ಕರ ಕ್ರಾಸ್‌ ಸಮೀಪದ ಈಡಿಗಾಸ್‌ ಲಾಡ್ಜ್‌ನಲ್ಲಿ ಜ.8ರಂದು ಕೊಠಡಿಯಲ್ಲಿದ್ದ ಜೋಡಿ ಮೇಲೆ ಗುಂಪು ಹಲ್ಲೆ ನಡೆಸಿತ್ತು. ಆ ನಂತರ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು.

ಜ.10ರಂದು ರೂಂಬಾಯ್‌ ನೀಡಿದ ದೂರಿನ ಮೇರೆಗೆ ಹಾನಗಲ್‌ ಪೊಲೀಸ್‌ ಠಾಣೆಯಲ್ಲಿ ‘ಅನೈತಿಕ ಪೊಲೀಸ್‌ಗಿರಿ’ ಪ್ರಕರಣ ಮಾತ್ರ ದಾಖಲಾಗಿತ್ತು.

- Advertisement -

ಜ.11ರಂದು ಮಹಿಳೆ ನ್ಯಾಯಾಧೀಶರ ಮುಂದೆ ಕಲಂ ‘164’ ಸಿಆರ್‌ಪಿಸಿ ಅಡಿಯಲ್ಲಿ ಹೇಳಿಕೆಯನ್ನು ದಾಖಲಿಸಿ, 7 ಜನರಿಂದ ಸಾಮೂಹಿಕ ಅತ್ಯಾಚಾರವಾಗಿದೆ ಎಂದು ತಿಳಿಸಿದ್ದರು. ಆನಂತರ ಎಫ್‌ಐಆರ್‌ನಲ್ಲಿ ‘376-ಡಿ’ ಸೆಕ್ಷನ್‌ ಅನ್ನು ಪೊಲೀಸರು ಸೇರಿಸಿದ್ದರು.

ಈ ಪ್ರಕರಣದಲ್ಲಿ ಮಾಹಿತಿ ಸಂಗ್ರಹಿಸುವಲ್ಲಿ ವೈಫಲ್ಯ, ಎಫ್‌ಐಆರ್‌ ದಾಖಲಿಸುವಲ್ಲಿ ನಿರ್ಲಕ್ಷ್ಯ ಮತ್ತು ಆರೋಪಿಗಳನ್ನು ಶೀಘ್ರ ಬಂಧಿಸುವಲ್ಲಿ ವಿಳಂಬ ಧೋರಣೆ ಆರೋಪದ ಮೇಲೆ ಇನ್‌ಸ್ಪೆಕ್ಟರ್‌ ಮತ್ತು ಕಾನ್‌ಸ್ಟೆಬಲ್‌ ಇಬ್ಬರನ್ನು ಅಮಾನತು ಮಾಡಲಾಗಿದೆ.



Join Whatsapp