ರಾಕೇಶ್​ ಟಿಕಾಯತ್​ ರೈತ ಮುಖಂಡನಾಗಿಲ್ಲದಿದ್ದರೆ ಇಷ್ಟೊತ್ತಿಗೆ ಎನ್​ಕೌಂಟರ್​ ಆಗಿರುತ್ತಿತ್ತು: ಬಿಜೆಪಿ ಶಾಸಕ

Prasthutha|

ಲಖನೌ: ರಾಕೇಶ್​ ಟಿಕಾಯತ್​ ರೈತರಿಗೆ ದ್ರೋಹ ಎಸಗಿದ್ದಾರೆ, ಆತ ಇಷ್ಟೊತ್ತಿಗಾಗಲೇ ಎನ್​ಕೌಂಟರ್​ ಆಗಬೇಕಿತ್ತು ಎಂದು ಹೇಳಿ ಬಿಜೆಪಿ ಶಾಸಕರೊಬ್ಬರು ಹೊಸ ವಿವಾದ ಹುಟ್ಟುಹಾಕಿದ್ದಾರೆ. ಉತ್ತರಪ್ರದೇಶದ ಗಾಜಿಯಾಬಾದ್​ನ ಲೋನಿ ವಿಧಾನಸಭಾ ಕ್ಷೇತ್ರದ ಶಾಸಕ ನಂದಕಿಶೋರ್​ ಗುರ್ಜಾರ್ ಹೀಗೆ ವಿವಾದಾತ್ಮಕವಾಗಿ ಮಾತಾಡಿದ್ದು,​ ಈ  ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement -

ಲೋನಿ ವಿಧಾನಸಭಾ ಕ್ಷೇತ್ರದ ಬಾಗ್‌ಪತ್‌ನ ದಗರ್‌ಪುರ ಗ್ರಾಮದಲ್ಲಿ ನಡೆದ ಕುಸ್ತಿ ಪಂದ್ಯಾವಳ ಉದ್ಘಾಟಿಸಿ ಮಾತನಾಡಿದ ಶಾಸಕ ನಂದಕಿಶೋರ್​ ಗುರ್ಜಾರ್,  ರೈತರ ಹೆಸರಲ್ಲಿ  ರಾಕೇಶ್​ ಟಿಕಾಯತ್​ ಜನರಿಗೆ ಅನ್ಯಾಯ ಮಾಡಿದ್ದಾನೆ. ಆತ ಒಂದು ವೇಳೆ ರೈತ ಮುಖಂಡನಾಗಿ ಗುರುತಿಸಿಕೊಂಡಿರಲಿಲ್ಲವೆಂದರೆ ಇಷ್ಟೊತ್ತಿಗಾಗಲೇ ಎನ್​ಕೌಂಟರ್​ ಆಗಿರುತ್ತಿತ್ತು ಎಂದು ಹೇಳಿದ್ದಾರೆ.

ರೈತ ಪಾಲಿಗೆ ಮರಣ ಶಾಶನವಾಗುತ್ತಿದ್ದ ವಿವಾದಿ ಕೃಷಿ ಮಸೂದೆಯನ್ನು ಸಮರ್ಥಿಸಿದ ಬಿಜೆಪಿ ಶಾಸಕ, ಆ ಕೃಷಿ ಮಸೂದೆಗಳು ಜಾರಿಗೆ ಬಂದಿದ್ದರೆ ಇಂದು ರೈತರ ಬದುಕುಗಳು ಬದಲಾಗುತ್ತಿದ್ದವು ಎಂದಿದ್ದಾರೆ. ಖಲಿಸ್ತಾನಿಗಳು ಮತ್ತು ಮಧ್ಯವರ್ತಿಗಳ ಜೊತೆಗಿನ ಒಡನಾಟದ ಮೂಲಕ ರಾಕೇಶ್​ ಟಿಕಾಯತ್ ಹೇಯ ಕೃತ್ಯಗಳನ್ನು ಎಸಗಿದ್ದಾರೆ. ಖಲಿಸ್ತಾನಿಗಳ ಬೆಂಬಲದೊಂದಿಗೆ ಆತ ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜವನ್ನು ಇಳಿಸಿ ಖಲಿಸ್ತಾನಿಗಳ ಬಾವುಟವನ್ನು ಹಾರಿಸಿ ದೇಶಕ್ಕೆ ಅವಮಾನ ಮಾಡಿದ. ಅದು ದೇಶದ ಇತಿಹಾಸದಲ್ಲೇ ಒಂದು ಕರಾಳ ಅಧ್ಯಾಯ ಎಂದು ಅವರು ಟೀಕಾಯತ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.



Join Whatsapp