ಜ್ಞಾನವಾಪಿ ಮಸೀದಿ ತೀರ್ಪು: ಮಸೀದಿ ಮನವಿ ತಿರಸ್ಕರಿಸಿ ದೇವಸ್ಥಾನ ಮನವಿ ವಿಚಾರಣೆಗೆ ಅರ್ಹ ಎಂದ ನ್ಯಾಯಾಲಯ

Prasthutha|

ವಾರಣಾಸಿ : ಜ್ಞಾನವಾಪಿ ಮಸೀದಿ ಸಂಕೀರ್ಣದೊಳಗೆ ಪೂಜೆ ಸಲ್ಲಿಕೆಗೆ ಕೋರಿರುವ ಮನವಿಯ ವಿಚಾರಣಾ ಅರ್ಹತೆ ಬಗ್ಗೆ
ಕೋರಿ ಸಲ್ಲಿಸಲಾದ ಅರ್ಜಿಯ ಕುರಿತಂತೆ ವಾರಣಾಸಿ ಜಿಲ್ಲಾ ಕೋರ್ಟ್ ತೀರ್ಪು ನೀಡಿದ್ದು, ಮಸೀದಿ ಮನವಿ ತಿರಸ್ಕರಿಸಿ ದೇವಸ್ಥಾನ ಮನವಿ ವಿಚಾರಣೆಗೆ ಅರ್ಹ ಎಂದು ಹೇಳಿದೆ.

- Advertisement -

ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಅಜಯ್ ಕೃಷ್ಣ ವಿಶ್ವೇಶ ಅವರು, ದೇವಸ್ಥಾನ ಅರ್ಜಿಯನ್ನು ಪುರಸ್ಕರಿಸಿದ್ದಾರೆ. ಮಸೀದಿಯ ಹೊರ ಗೋಡೆಯೊಂದರ ಬಳಿ ಹಿಂದೂ ದೇವತೆಗಳ ವಿಗ್ರಹಗಳು ಇವೆ. ಅವುಗಳಿಗೆ ಪ್ರತಿದಿನ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಹಿಂದು ಧರ್ಮಕ್ಕೆ ಸೇರಿದ ಐವರು ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಈ ಕುರಿತು ನ್ಯಾಯಾಲಯ ಇಂದು ಹಿಂದುಗಳ ಕುರಿತ ಅರ್ಜಿಯನ್ನು ಪುರಸ್ಕರಿಸಿದೆ.

ಗ್ಯಾನ್ ವಾಪಿ ಮಸೀದಿಯ ಒಡೆತನ, ಹಕ್ಕು, ಅದರ ಸುತ್ತ ಇರುವ ಜಾಗದ ಬಗೆಗೆ ತನ್ನ ಹಕ್ಕು ಮಂಡಿಸಿ ಅಂಜುಮಾನ್ ಇಂತೆಝಾಮಿಯಾ ಮಸೀದಿ ಸಮಿತಿಯು ಸಿವಿಲ್ ನ್ಯಾಯಾಲಯದ ತೀರ್ಪು ಪ್ರಶ್ನಿಸಿದ ಅರ್ಜಿಯನ್ನು ವಜಾ ಮಾಡಿದ ಬನಾರಸ್ ಜಿಲ್ಲಾ ಕೋರ್ಟು ಹಿಂದೂಗಳ ಹಕ್ಕಿಗೆ ಮಾನ್ಯತೆ ನೀಡಿದೆ.
ಅರ್ಜಿದಾರರ ಪರ ವಕೀಲರಾದ ಮಿರಾಜುದ್ದೀನ್ ಸಿದ್ದಿಕಿಯವರು ಈ ತೀರ್ಪನ್ನು ಅಲಹಾಬಾದ್ ಹೈ ಕೋರ್ಟಿನಲ್ಲಿ ಪ್ರಶ್ನಿಸಲಾಗುವುದು ಎಂದು ಹೇಳಿದರು.

- Advertisement -

ತೀರ್ಪಿನ ಹಿನ್ನೆಲೆಯಲ್ಲಿ ವಾರಣಾಸಿಯಲ್ಲಿ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ವಾರಣಾಸಿ ಪೊಲೀಸ್ ಕಮಿಶನರೇಟ್ ವಲಯದಲ್ಲಿ ನಿಷೇಧಾಜ್ಞೆ ಹೇರಿರುವುದಾಗಿ ಬನಾರಸ್ ಪೋಲೀಸು ಕಮಿಶನರ್ ಎ. ಸತೀಶ್ ಗಣೇಶ್ ತಿಳಿಸಿದ್ದಾರೆ. ಧಾರ್ಮಿಕ ನಾಯಕರು ಪರಸ್ಪರ ಸಂವಾದ ಸಂವಹನದ ಮೂಲಕ ಉದ್ವಿಗ್ನತೆಗೆ ಅವಕಾಶ ನೀಡದಂತೆ ನೋಡಿಕೊಳ್ಳಬೇಕು ಎಂದೂ ಪೊಲೀಸ್ ಕಮಿಶನರ್ ಮನವಿ ಮಾಡಿದ್ದಾರೆ.
ನಗರವನ್ನು ಹಂತಗಳಾಗಿ ವಿಭಾಗ ಮಾಡಿ ಆಯಾ ವಿಭಾಗಗಳನ್ನು ನೋಡಿಕೊಳ್ಳಲು ಪೋಲೀಸು ತುಕಡಿಗಳನ್ನು ನಿಶ್ಚಿತಗೊಳಿಸಿ ಬಿಡಲಾಗಿದೆ. ನಗರ ಮತ್ತು ಜಿಲ್ಲೆಯ ಗಡಿ ಪ್ರದೇಶ, ನಗರದ ಹೋಟೆಲ್ ಮತ್ತು ಅತಿಥಿ ಗೃಹಗಳ ಮೇಲೆ ಕಣ್ಣಿಡಲು ಸಹ ಪೋಲೀಸರನ್ನು ನಿಯೋಜಿಸಲಾಗಿದೆ ಎಂದು ಕಮಿಶನರ್ ಹೇಳಿದರು.
ಕಳೆದ ತಿಂಗಳು ಕೋರ್ಟು ಮುಸ್ಲಿಂ ಮತ್ತು ಹಿಂದೂ ಎರಡೂ ಕಡೆಯ ವಾದಗಳನ್ನು ಆಲಿಸಿ ಅದನ್ನು ದಾಖಲಿಸಿಕೊಂಡಿತ್ತು. ಇಂದು ತೀರ್ಪು ಪ್ರಕಟಿಸಲಾಗಿದೆ.



Join Whatsapp