ಶ್ರೀ ವಾಣಿ ವಿಜಯ ಹೈಯರ್ ಸೆಕೆಂಡರಿ ಸ್ಕೂಲ್’ನಲ್ಲಿ “ಗುರುವಂದನಂ – ಸಹಪಾಠಿಗಳ ಸಮ್ಮಿಲನ

Prasthutha|

ಶ್ರೀ ವಾಣಿ ವಿಜಯ ಹೈಯರ್ ಸೆಕೆಂಡರಿ ಸ್ಕೂಲ್ ಕೊಡ್ಲಮೊಗರಿನಲ್ಲಿ 2003-04ನೇ ಎಸ್ ಎಸ್ ಎಲ್ ಸಿ ಬ್ಯಾಚಿನ ವಿದ್ಯಾರ್ಥಿಗಳಿಂದ “ಗುರುವಂದನಂ ಮತ್ತು ಸಹಪಾಠಿಗಳ ಸಮ್ಮಿಲನ” ಎಂಬ ಕಾರ್ಯಕ್ರಮವು ಇತ್ತೀಚೆಗೆ ಜರಗಿತು.
ನಿವೃತ್ತ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ಭಟ್ ಇವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು ಸಾಯಿನಿಕೇತನ ಸೇವಾಶ್ರಮ ದೈಗೋಳಿ ಇದರ ಸಂಚಾಲಕರಾದ ಡಾ. ಉದಯ್ ಕುಮಾರ್ ನೂಜಿ ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಆ ಬಳಿಕ ಮಾತನಾಡಿದ ಅವರು “ಗುರುವು ಪ್ರತಿಯೊಬ್ಬ ವ್ಯಕ್ತಿಯ ಬದುಕಿನ ಅಂಧಕಾರವನ್ನು ತೊಳಗಿಸಿ ಜ್ಞಾನದ ಬೆಳಕು ನೀಡುವವರು. ಇಂತಹ ಗುರುಗಳನ್ನು ದೇವರಿಗಿಂತಲೂ ಮಿಗಿಲಾದ ಸ್ಥಾನದಲ್ಲಿ ಕಾಣಲಾಗುತ್ತದೆ. ಯಾಕೆಂದರೆ ದೇವರನ್ನು ಪರಿಚಯ ಮಾಡಿಕೊಡುವವರು ಕೂಡ ಗುರುಗಳೇ ಆಗಿದ್ದಾರೆ. ಆದುದರಿಂದ ಗುರುಗಳು ನಿತ್ಯ ಸ್ಮರಣಾರ್ಹರು” ಎಂದು ನುಡಿದರು.
ಶ್ರೀ ವಾಣಿ ವಿಜಯ ಹೈಯರ್ ಸೆಕೆಂಡರಿ ಸ್ಕೂಲಿನ ಪ್ರಾಂಶುಪಾಲ ಚಂದ್ರಕುಮಾರ್ ಕೆ, ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಭಾರತಿ, ಪ್ರಭಾರ ಮುಖ್ಯೋಪಾಧ್ಯಾಯನಿ ಕೃಷ್ಣವೇಣಿ ಹಾಗೂ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮತ್ತು ಪ್ರಸ್ತುತ ಸೇವೆಯಲ್ಲಿರುವ ಶಿಕ್ಷಕ-ಶಿಕ್ಷಕಿಯರ ಗೌರವ ಉಪಸ್ಥಿತಿಯಲ್ಲಿ ಜರಗಿದ ಸಮಾರಂಭದಲ್ಲಿ ಎಲ್ಲಾ ಗುರುಗಳನ್ನು ಶಾಲು ಹೊದಿಸಿ, ಫಲ – ಪುಷ್ಪ, ಸ್ಮರಣಿಕೆಯನ್ನು ನೀಡಿ ಗೌರವದ ಗುರು ವಂದನೆ ಸಲ್ಲಿಸಲಾಯಿತು.
ಹಳೆ ವಿದ್ಯಾರ್ಥಿನಿಯಾದ ಅಬ್ಸ ಸುಳ್ಯಮೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಜಮಾಲುದ್ದೀನ್, ಶಾಲಾ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು ಮತ್ತು ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿನೋದ್ ಕಡಂಬಾರ್ ಸ್ವಾಗತಿಸಿ, ಅವಿನಾಶ್ ಹೊಳ್ಳ ವಂದಿಸಿದರು. ಚೇತನ್ ವರ್ಕಾಡಿ ಕಾರ್ಯಕ್ರಮ ನಿರ್ವಹಿಸಿದರು.

- Advertisement -

- Advertisement -



Join Whatsapp