ಕತಾರ್ ನ ಮತಾರ್ ಖದೀಮ್ ಎಂಬಲ್ಲಿ ವಾಸವಾಗಿದ್ದ ಅನಿವಾಸಿ ಭಾರತೀಯರಾದ ಉಡುಪಿಯ, ಕಾಪು ನಿವಾಸಿ, 55 ವರ್ಷದ ಹನೀಫ್ ಅಬ್ಬಾಸ್, 2020 ರ ಮೇ ತಿಂಗಳಲ್ಲಿ, ಹೃದಯಾಘಾತವಾಗಿ, ವಕ್ರಾದ ಹಮದ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ಅವರ ಕುಟುಂಬದ ಸದಸ್ಯರಿಂದ ವಿಷಯ ತಿಳಿದ QISF ನ ಕರ್ನಾಟಕ ಘಟಕದ ಕಾರ್ಯದರ್ಶಿ, ಇಂತಿಯಾಜ಼್ ಕಾರ್ನಾಡ್ ರವರು ಕೂಡಲೇ ಕಾರ್ಯಪ್ರವೃತ್ತರಾಗಿ, ಆಸ್ಪತ್ರೆಯ ವೈದ್ಯರನ್ನು ಭೇಟಿಯಾಗಿ, ರೋಗಿಯ ಬಗ್ಗೆ ವಿವರಗಳನ್ನು ಪಡೆದು, ಅವರ ಕುಟುಂಬದವರಿಗೆ ತಿಳಿಸುತ್ತಿದ್ದರು.
ಕೋವಿಡ್ 19 ರ ಮುಂಜಾಗ್ರತಾ ಕ್ರಮವಾಗಿ, ಹನೀಫ್ ರವರನ್ನು ಮೆಕಾನಿಯಲ್ಲಿರುವ ಕೋವಿಡ್ ಸೆಂಟರ್ ಗೆ ರವಾನಿಸಲಾಗಿತ್ತು. ಈ ಸೆಂಟರ್ ಗೆ ಬಂದು ಯಾರಿಗೂ ರೋಗಿಯನ್ನು ಭೇಟಿ ಮಾಡುವ ಅವಕಾಶವಿಲ್ಲ. ಇಂತಹ ಪರಿಸ್ಥಿತಿಯಲ್ಲೂ, ಇಮ್ತಿಯಾಜ಼್ ರವರು ಆಸ್ಪತ್ರೆಯ ಅಧಿಕಾರಿಗಳ ಅಪ್ಪಣೆ ಪಡೆದು, ಎಲ್ಲಾ ಮುನ್ನೆಚ್ಚರಿಕೆಗಳನ್ನು ವಹಿಸಿ, PP ಕಿಟ್ ಧರಿಸಿ, ಹಲವಾರು ಬಾರಿ ಹನೀಫ್ ರವರನ್ನು ಭೇಟಿಯಾಗುತ್ತಿದ್ದರು.
ಹನೀಫ್ ರವರು ಚೇತರಿಸಿಕೊಂಡ ನಂತರ, ಅವರನ್ನು ರುಮೈಲಾ ಆಸ್ಪತ್ರೆಗೆ ವರ್ಗಾಯಿಸಲಾಗಿ, ಅಲ್ಲಿಯೂ ಸಹ ಆಸ್ಪತ್ರೆಯ ಸಾಮಾಜಿಕ ಸೇವಾ ಸಿಬ್ಬಂದಿ, ಗೋವಿಂದನ್ ಕುಟ್ಟಿ, ಇಮ್ತಿಯಾಜ಼್ ರವರ ನಿಕಟ ಸಂಪರ್ಕದಲ್ಲಿದ್ದರು.
ಇದಾದ ನಂತರ, ಇಮ್ತಿಯಾಜ಼್ ಕಾರ್ನಾಡ್, ಲತೀಫ್ ಮಡಿಕೇರಿ ಹಾಗೂ ಇರ್ಫಾನ್ ಕಾಪುರವರನ್ನೊಳಗೊಂಡ QISF ತಂಡವು ಹನೀಫ್ ರವರನ್ನು ಸಂದರ್ಶಿಸಿ, ಊರಿಗೆ ಕಳುಹಿಸುವ ವಿಷಯದ ಬಗ್ಗೆ ತಿಳಿಸಿ, ಅವರ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ, ಹನೀಫ್ ರನ್ನು ಅಧ್ಯಯನ ಮಾಡುತ್ತಿದ್ದ ಸಯ್ಯದ್ ರವರನ್ನು ಸಂಪರ್ಕಿಸಿ ವಿಷಯ ತಿಳಿಸಿದಾಗ, ಸಯ್ಯದ್ ರವರು ಕೂಡಲೇ ಸ್ಪಂದಿಸಿ, ರೋಗಿಯನ್ನು ಊರಿಗೆ ಕಳುಹಿಸಲು ಅಗತ್ಯವಾದ ಎಲ್ಲಾ ಖರ್ಚನ್ನು ಆಸ್ಪತ್ರಯೇ ಭರಿಸುತ್ತದೆ, ನೀವು ಹನೀಫ್ ರವರ ಕುಟುಂಬದವರೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯವಾದ ದಾಖಲೆಗಳನ್ನು ಪಡೆದು, ನಮ್ಮೊಂದಿಗೆ ಸಹಕರಿಸಿ ಎಂದು ಹೇಳಿದರು.
ತಕ್ಷಣ, ಕಾರ್ಯಪ್ರವೃತ್ತವಾದ QISF ತಂಡವು, ಹನೀಫ್ ರವರಿದ್ದ ರೂಮಿಗೆ ಭೇಟಿ ನೀಡಿ, ಅಗತ್ಯವಿದ್ದ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ಆಸ್ಪತ್ರೆಯ ಸಿಬ್ಬಂದಿಗೆ ನೀಡಲಾಯಿತು.
ದಿನಾಂಕ 08-02-2021 ರಂದು, ದೋಹದಿಂದ ಮಂಗಳೂರಿಗೆ ಹೋಗುವ ಬೆಳಿಗ್ಗೆ 10.30ರ ಏರ್ ಇಂಡಿಯಾ ವಿಮಾನದಲ್ಲಿ, ವೀಲ್ ಚೇರ್ ನಲ್ಲಿ, ಹಮದ್ ಆಸ್ಪತ್ರೆಯ ಒಬ್ಬ ನರ್ಸ್ ನ ಸಹಾಯದೊಂದಿಗೆ, ರೋಗಿಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಏರ್ಪಡಿಸಿ ಕಳುಹಿಸಿಕೊಡಲು ಸಾಧ್ಯವಾಯಿತು. ಅದೇ ದಿನ ಸಂಜೆ, ಭಾರತೀಯ ಸಮಯ ಸಂಜೆ 5 ಗಂಟೆಗೆ ಹನೀಫ್ ರವರನ್ನು ಅವರ ಕುಟುಂಬಸ್ತರಿಗೆ ಹಸ್ತಾಂತರಿಸಲಾಯಿತು.
ಕತಾರ್ ನ ಆರೋಗ್ಯ ಇಲಾಖೆಯ ಸೇವೆಯನ್ನು ಎಲ್ಲರೂ ಮೆಚ್ಚಲೇಬೇಕು. ಸ್ವದೇಶಿ, ವಿದೇಶಿ ಎಂಬ ತಾರತಮ್ಯವಿಲ್ಲದೇ, ಎಲ್ಲಾ ರೋಗಿಗಳನ್ನು ಉತ್ತಮವಾಗಿ ಆರೈಕೆ ಮಾಡಿ, ಉಪಚರಿಸಿ, ಅವರು ಗುಣಮುಖರಾದಾಗ, ಅವರನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸುವ ಕಾರ್ಯವು ಬಹಳ ಪ್ರಶಂಸನೀಯವಾದುದು ಎಂದು QISF ಅಭಿಪ್ರಾಯ ಪಟ್ಟಿದೆ.
ಈ ತರಹದ ರೋಗಿಗಳ ಸೇವೆಗೆ ಕತಾರ್ ನ ಹಮದ್ ಆಸ್ಪತ್ರೆ ಯ ಡಾಕ್ಟರ್, ನರ್ಸ್, ಸಾಮಾಜಿಕ ಕಾರ್ಯಕರ್ತರು ಹಾಗೂ ಇತರೆ ಎಲ್ಲಾ ಸಿಬ್ಬಂದಿ ವರ್ಗ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ.
ಈ ಕಾರ್ಯದಲ್ಲಿ ಕೈಜೋಡಿಸಿದ, ಆರೋಗ್ಯ ಇಲಾಖೆ ಸಿಬ್ಬಂದಿ, ಹಮದ್ ಆಸ್ಪತ್ರೆ ಸಿಬ್ಬಂದಿ ಹಾಗೂ ಸಾಮಾಜಿಕ ಕಾರ್ಯಕರ್ತರಿಗೆ ಕತಾರ್ ಇಂಡಿಯನ್ ಸೋಷಿಯಲ್ ಫೋರಂ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತದೆ ಮತ್ತು ಇಂತಹ ಯಾವುದೇ ಸಮಾಜ ಸೇವೆಗೆ QISF ನ ಅಗತ್ಯವಿದ್ದಲ್ಲಿ ಸಂಪರ್ಕಿಸಬೇಕಾಗಿ ಕೇಳಿಕೊಳ್ಳುತ್ತಿದೆ.