ಭಕ್ತಿಗೀತೆಗೆ ಮನಸೋತು ಗಾಯಕಿಯ ಮೇಲೆ ಬಕೆಟ್’ನಲ್ಲಿ ಹಣ ಸುರಿದ ಅಭಿಮಾನಿ !

Prasthutha|

ಗುಜರಾತ್: ವೇದಿಕೆಯ ಮೇಲೆ ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯೊಬ್ಬರ ಸ್ವರಮಾಧುರ್ಯಕ್ಕೆ ಮನಸೋತ ಅಭಿಮಾನಿಯೊಬ್ಬ ಬಕೆಟ್’ನಲ್ಲಿ ಹಣ ತಂದು ಸುರಿಯುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement -

ಗುಜರಾತ್’ನಲ್ಲಿ ಇತ್ತೀಚೆಗೆ ನಡೆದ ‘ತುಳಸಿ ವಿವಾಹ’ ಹಬ್ಬದ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಖ್ಯಾತ ಜನಪದ ಗಾಯಕಿ ಊರ್ವಶಿ ರದಾದಿಯಾ, ತನ್ನ ಸಹ ಕಲಾವಿದರೊಂದಿಗೆ ಭಜನೆಗಳನ್ನು ಹಾಡುತ್ತಿದ್ದರು. ಊರ್ವಶಿ ರದಾದಿಯಾರ ಸ್ವರ ಮಾಧುರ್ಯಕ್ಕೆ ಮನಸೋತ ಅಭಿಮಾನಿಯೊಬ್ಬ ಹಣ ತುಂಬಿದ್ದ ಬಕೆಟ್’ನೊಂದಿಗೆ ಹಿಂಬದಿಯಿಂದ ವೇದಿಕೆ ಪ್ರವೇಶಿಸಿ ಬಕೆಟ್’ನಲ್ಲಿದ್ದ ಹಣವನ್ನು ಗಾಯಕಿ ಊರ್ವಶಿ ರದಾದಿಯಾ ಮೇಲೆ ಸುರಿದಿದ್ದಾನೆ.

- Advertisement -

ಈ ವೀಡಿಯೋವನ್ನು ಸ್ವತಃ ಊರ್ವಶಿ ರದಾದಿಯಾ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆ ಅದಾಗಲೇ ಹಣದ ರಾಶಿಯಿಂದ ತುಂಬಿದ್ದರೂ, ಬಿಳಿ ವಸ್ತ್ರ ಧರಿಸಿದ್ದ ಅಭಿಮಾನಿಯೊಬ್ಬ ಬಕೆಟ್’ನಲ್ಲಿ ಹಣ ಸುರಿಯುವುದನ್ನು ವೀಡಿಯೋದಲ್ಲಿ ನೋಡಬಹುದು. ತನ್ನ ಮೇಲೆ ಹಣ ಸುರಿಯುತ್ತಿದ್ದರೂ ಹಾರ್ಮೋನಿಯಮ್ ಮೇಲೆ ಬಿದ್ದಿದ್ದ ಹಣವನ್ನು ತೆರವುಗೊಳಿಸಿ ಮುಗುಳ್ನಗುತ್ತಾ ಊರ್ವಶಿ ರದಾದಿಯಾ ಹಾಡುವುದನ್ನು ಉಂದುವರಿಸುತ್ತಾರೆ. ತನ್ನನ್ನು ಬೆಂಬಲಿಸಿದ ಎಲ್ಲರಿಗೂ ಗಾಯಕಿ  ಇನ್ಸ್ಟಾಗ್ರಾಮ್’ನಲ್ಲಿ ಧನ್ಯವಾದ ತಿಳಿಸಿದ್ದಾರೆ.

Join Whatsapp