ಗಾಳಿ‍‍ಪಟ ದಾರ ಕುತ್ತಿಗೆ ಸೀಳಿ ಮೂವರು ಮಕ್ಕಳು ಸೇರಿ 6 ಮಂದಿ ಮೃತ್ಯು

Prasthutha|

ಅಹಮದಾಬಾದ್‌: ಗುಜರಾತ್‌ನಲ್ಲಿ ನಡೆಯುತ್ತಿರುವ ಉತ್ತರಾಯಣ ಹಬ್ಬದ ವೇಳೆ ಗಾಳಿಪಟ ಹಾರಿಸುವಾಗ ಅದರ ದಾರದಿಂದ ಕುತ್ತಿಗೆ ಸೀಳಿ ಮೂವರು ಮಕ್ಕಳು ಸೇರಿದಂತೆ ಕನಿಷ್ಠ 6 ಜನ ಮೃತರಾಗಿದ್ದು, 176 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

- Advertisement -

‘ಹಬ್ಬದ ಸಂದರ್ಭದಲ್ಲಿ ಮನೆಯ ಮೇಲ್ಛಾವಣಿ ಮೇಲೆ ಗಾಳಿಪಟಗಳನ್ನು ಹಾರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ಕೆಲವರು ಗಾಳಿಪಟಕ್ಕೆ ಹರಿತವಾದ ದಾರ ಬಳಸಿದ್ದರು. ಅದು ಕುತ್ತಿಗೆಗೆ ಸಿಲುಕಿಕೊಂಡಿದ್ದರಿಂದ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.   

‘ಭಾವ್‌ನಗರದಲ್ಲಿ ತಂದೆಯೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ 2 ವರ್ಷದ ಕೀರ್ತಿ ಎಂಬ ಮಗುವಿನ ಕುತ್ತಿಗೆಗೆ ಗಾಳಿಪಟದ ದಾರ ಸುತ್ತಿಕೊಂಡಿತ್ತು. ತೀವ್ರ ರಕ್ತಸ್ರಾವದಿಂದ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮಗು ಅಸುನೀಗಿದೆ. ಗಾಳಿಪಟದ ದಾರದಿಂದಾಗಿ ವಿಸ್ ‌ನಗರದಲ್ಲಿ ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ 3 ವರ್ಷದ ಕಿಸ್ಮತ್‌ ಳ ಕುತ್ತಿಗೆ ಸೀಳಿತ್ತು. ಆಕೆ ಆಸ್ಪತ್ರೆಗೆ ಸಾಗಿಸುವುದರೊಳಗೆ ಮೃತಳಾಗಿದ್ದಳು’ ಎಂದು ತಿಳಿಸಿದ್ದಾರೆ.

- Advertisement -

‘ರಾಜ್‌ಕೋಟ್‌ನಲ್ಲಿ ಪಾಲಕರೊಂದಿಗೆ ಗಾಳಿಪಟ ಹಿಡಿದು ಬೈಕ್‌ನಲ್ಲಿ ತೆರಳುತ್ತಿದ್ದ 7 ವರ್ಷದ ರಿಷಭ್‌ ವರ್ಮಾ ಎಂಬಾತನ ಕುತ್ತಿಗೆಗೆ ದಾರ ಸುತ್ತಿಕೊಂಡು ಆತ ಮೃತನಾಗಿದ್ದಾನೆ. ವಡೋದರ, ಕಚ್‌ ಹಾಗೂ ಗಾಂಧಿನಗರ ಜಿಲ್ಲೆಗಳಲ್ಲೂ ಇದೇ ಬಗೆಯ ಘಟನೆ ನಡೆದು ಮೂವರು ಪುರುಷರು ಮೃತರಾಗಿದ್ದಾರೆ’ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಗಾಳಿಪಟದ ದಾರಗಳಿಂದಾಗಿ 130 ಜನರಿಗೆ ಗಾಯಗಳಾಗಿವೆ. 46 ಮಂದಿ ಗಾಳಿಪಟ ಹಾರಿಸುವ ಭರದಲ್ಲಿ ಎತ್ತರದ ಸ್ಥಳದಿಂದ ಬಿದ್ದು ಗಾಯಗೊಂಡಿದ್ದಾರೆ.

Join Whatsapp