ಗುಜರಾತ್ ದಲಿತರ ಹೋರಾಟಕ್ಕೆ ಪ್ರಚಂಡ ವಿಜಯ | ಇನ್ನು ಪ್ರತಿ ಶಾಲೆಗಳಲ್ಲಿ ಅಂಬೇಡ್ಕರ್ ಫೋಟೊ ಕಡ್ಡಾಯ

Prasthutha: September 1, 2020

ಅಹಮದಾಬಾದ್ : ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತಿನ ದಲಿತರು ಕೊನೆಗೂ ತಮ್ಮ ಹೊರಾಟದಲ್ಲಿ ಮಹತ್ವದ ಗೆಲುವು ಸಾಧಿಸಿದ್ದಾರೆ. ಇದೇ ಮೊದಲ ಬಾರಿಗೆ ರಾಜ್ಯದ ಎಲ್ಲಾ ಖಾಸಗಿ ಮತ್ತು ಸರಕಾರಿ ಶಾಲೆಗಳಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಅಥವಾ ಪ್ರತಿಮೆ ತಮ್ಮ ಆವರಣದಲ್ಲಿ ಕಡ್ಡಾಯವಾಗಿ ಹಾಕಬೇಕು ಎಂದು ಸರಕಾರ ಆದೇಶಿಸಿದೆ. ದಲಿತ ಅಧಿಕಾರ್ ಮಂಚ್ ಸಂಘಟಿಸಿದ್ದ ಮ್ಯಾರಥಾನ್ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು, ಈ ಕುರಿತ ಆದೇಶ ಅಧಿಕೃತವಾಗಿ ಹೊರಬಿದ್ದಿದೆ. ಇದರಿಂದಾಗಿ ಅಹಮದಾಬಾದ್ ಜಿಲ್ಲೆಯ 1,500 ಖಾಸಗಿ ಮತ್ತು ಸರಕಾರಿ ಶಾಲೆಗಳಲ್ಲಿ ಈಗ ಅಂಬೇಡ್ಕರ್ ಪ್ರತಿಮೆ ಅಥವಾ ಫೋಟೊ ಹಾಕುವುದು ಕಡ್ಡಾಯವಾಗಿದೆ.

ಅಹಮದಾಬಾದ್ ಜಿಲ್ಲೆಯಲ್ಲಿ ಕಳೆದ ಏಳು ತಿಂಗಳಿನಿಂದ ಈ ಸಂಬಂಧ ಮಂಚ್ ಹೋರಾಟ ಸಂಘಟಿಸಿತ್ತು. ಕೊನೆಗೂ ಜಿಲ್ಲಾ ಶಿಕ್ಷಣಾಧಿಕಾರಿ ಅವರು ಎಲ್ಲ ತಾಲೂಕು ಅಧಿಕಾರಿಗಳಿಗೆ ಈ ಬಗ್ಗೆ ಸುತ್ತೋಲೆ ಜಾರಿಗೊಳಿಸಿದ್ದಾರೆ. ಈ ಆದೇಶದ ಹಿನ್ನೆಲೆಯಲ್ಲಿ, ಮಹಾತ್ಮ ಗಾಂಧಿ ಮತ್ತು ಸರ್ದಾರ್ ವಲ್ಲಭ ಭಾಯಿ ಪಟೇಲ್ ಫೋಟೊವನ್ನಷ್ಟೇ ಇಡುತ್ತಿದ್ದ ಶಾಲೆಗಳು ಈಗ ಅಂಬೇಡ್ಕರ್ ಅವರ ಫೋಟೊ ಹಾಕಲು ಆರಂಭಿಸಿವೆ. ಎಲ್ಲಾ ಸರಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಅಥವಾ ಪ್ರತಿಮೆ ಸ್ಥಾಪಿಸಲು ಈಗಾಗಲೇ ಕಳೆದ ಫೆಬ್ರವರಿಯಲ್ಲೇ ಆದೇಶ ಹೊರಬಿದ್ದಿತ್ತು. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಈ ಸಂಬಂಧ ನಿರ್ದೇಶನ ನೀಡಿದ್ದರು.

ಇನ್ನೊಂದೆಡೆ, ಶಾಲೆಗಳಲ್ಲಿ ಸ್ಥಳೀಯ ಭಾಷೆಯಲ್ಲಿ ಸಂವಿಧಾನದ ಪೀಠಿಕೆ ಓದಿಸಬೇಕೆಂಬ ಬೇಡಿಕೆಯೂ ಹಲವು ಸಾಮಾಜಿಕ, ರಾಜಕೀಯ ಸಂಘಟನೆಗಳಿಂದ ಒತ್ತಾಯ ಕೇಳಿಬಂದಿದೆ. ದೇಶದ ಸಮಗ್ರ ಸ್ವಾತಂತ್ರ್ಯ ಹೋರಾಟ ಮತ್ತು ದೇಶದ ಬಹುಸಂಖ್ಯಾತ ಸಮುದಾಯಗಳಾದ ದಲಿತ, ಇತರ ಹಿಂದುಳಿದವರು, ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಮಹಿಳೆಯರಿಗಾಗಿ ಯಶಸ್ವಿ ಹೋರಾಟಗಳನ್ನು ನಡೆಸಿದ್ದ ಡಾ. ಅಂಬೇಡ್ಕರ್ ಅವರ ಫೋಟೊ ಸಾರ್ವಜನಿಕ ಸ್ಥಳಗಳಲ್ಲಿಡಲು ಹೋರಾಟ ಮಾಡಬೇಕಾದ ಅನಿವಾರ್ಯತೆ ಇನ್ನೂ ಸಮಾಜದಲ್ಲಿರುವುದು ದುರದೃಷ್ಟಕರ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ