ಅಹಮದಾಬಾದ್: ಘನತ್ಯಾಜ್ಯ ವಿಲೇವಾರಿಯಿಂದ ಮಾಲಿನ್ಯ ಸಮಸ್ಯೆ ಎದುರಿಸುತ್ತಿರುವ ರಾಜಕೋಟ್ ಜಿಲ್ಲೆಯ ಆರು ಗ್ರಾಮಗಳು ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಒಟ್ಟು ₹ 25 ಲಕ್ಷ ಪರಿಹಾರ ಪಡೆಯಲಿವೆ ಎಂದು ‘ಪರ್ಯಾವರಣ ಮಿತ್ರ’ ಎಂಬ ಎನ್ ಜಿಒ ತಿಳಿಸಿದೆ.
‘2013ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ ಜಿಟಿ) ಆದೇಶಿಸಿರುವಂತೆ, ಈ ಪರಿಹಾರ ಮೊತ್ತವನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಠೇವಣಿ ಇಡುವಂತೆ ಹೆಂಜರ್ ಬಯೊಟೆಕ್ ಎನರ್ಜೀಸ್ ಪ್ರೈವೇಟ್ ಲಿಮಿಟೆಡ್ (ಎಚ್ಬಿಇಪಿಎಲ್) ಎಂಬ ಕಂಪನಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ’ ಎಂದು ಎನ್ಜಿಒ ತಿಳಿಸಿದೆ.
‘ಈ ಪರಿಹಾರ ಮೊತ್ತವನ್ನು ಬಾಧಿತ ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾಧಿಕಾರಿ ಹಂಚಿಕೆ ಮಾಡಬೇಕು ಎಂದೂ ಸುಪ್ರೀಂ ಕೋರ್ಟ್ ಸೂಚಿಸಿದ್ದು, ಈ ಹಣ ಬಿಡುಗಡೆಯಾಗುವ ಬಗ್ಗೆಯೂ ಗಮನ ನೀಡಲಾಗುವುದು’ ಎಂದು ತಿಳಿಸಿದೆ.