ಗುಜರಾತ್ ಗಲಭೆ: ಮೋದಿ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿದ್ದಾರೆಂದು ಮತ್ತೊಬ್ಬ ಮಾಜಿ ಪೊಲೀಸ್ ಅಧಿಕಾರಿಯ ಬಂಧನ

Prasthutha|

- Advertisement -

ಅಹ್ಮದಾಬಾದ್: ಗುಜರಾತ್ ಪೊಲೀಸರು ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಬಂಧನದ ಬಳಿಕ ನಿವೃತ್ತ ಹಿರಿಯ ಪೊಲೀಸ್‌ ಅಧಿಕಾರಿ ಆರ್ ಬಿ ಶ್ರೀಕುಮಾರ್‌ ಅವರನ್ನು ಗುಜರಾತ್‌ನ ಗಾಂಧಿನಗರದ ಅವರ ಮನೆಯಿಂದ ಅಹಮದಾಬಾದ್‌ನ ಶನಿವಾರ ವಶಕ್ಕೆ ಪಡೆದಿದ್ದಾರೆ.


2002ರಲ್ಲಿ ಗುಜರಾತ್‌ನಲ್ಲಿ ನಡೆದ ಕೋಮು ಗಲಭೆಗಳ ಬಗ್ಗೆ ಗುಜರಾತ್‌ ಸರ್ಕಾರದ ವೈಫಲ್ಯತೆಯ ಕುರಿತು ಆಧಾರರಹಿತ ತಪ್ಪು ಆರೋಪಗಳನ್ನು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ತೀರ್ಪಿನ ವೇಳೆ ಹೇಳಿದ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ. ಅಲ್ಲದೇ, ತೀರ್ಪು ಬಂದ ಬಳಿಕ ಸುದ್ದಿ ಸಂಸ್ಥೆ ಜೊತೆ ನಡೆಸಲಾದ ಸಂದರ್ಶನದಲ್ಲಿ ಅಮಿತ್ ಷಾ ಅವರು ತೀಸ್ತಾ ಸೆಟಲ್ವಾಡ್ ಅವರ ಹೆಸರನ್ನು ಬಹಿರಂಗವಾಗಿಯೇ ಉಲ್ಲೇಖಿಸಿದ್ದರು. ಅವರ ಸಂದರ್ಶನ ಪ್ರಸಾರವಾದ ಕೆಲವೇ ಕೆಲವು ಗಂಟೆಯಲ್ಲಿ ಈ ಬೆಳವಣಿಗೆ ನಡೆದಿದೆ.

- Advertisement -

ಅಪರಾಧ ದಳದ ಪೊಲೀಸ್‌ ಅಧಿಕಾರಿಯೊಬ್ಬರು, ತೀಸ್ತಾ ಹಾಗೂ ಶ್ರೀಕುಮಾರ್‌ ಅವರು ತನಿಖಾ ಅಧಿಕಾರಿಗಳೊಂದಿಗೆ ಕೈಜೋಡಿಸಿ ಸಂಚು ರೂಪಿಸುವ ಮೂಲಕ ನಕಲಿ ದಾಖಲೆಗಳು, ಸಾಕ್ಷ್ಯಗಳನ್ನು ಸೃಷ್ಟಿಸಿ ಭಾರತೀಯ ಅಪರಾಧ ಸಂಹಿತೆಯಡಿ ಅಪರಾಧ ಕೃತ್ಯವೆಸಗಿದ್ದಾರೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಇವರಿಬ್ಬರನ್ನೂ ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ.

ತೀಸ್ತಾ ಹಾಗೂ ಶ್ರೀಕುಮಾರ್ ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 468 (ನಕಲಿ ದಾಖಲೆಯ ಸೃಷ್ಟಿ), 471(ನಕಲಿ ದಾಖಲೆಯನ್ನು ಅಸಲಿಯೆಂದು ಬಳಸುವುದು), 194 (ತಿರುಚಲಾದ ಸಾಕ್ಷ್ಯ ನೀಡುವುದು) 211 (ಹಾನಿಯುಂಟು ಮಾಡುವ ಉದ್ದೇಶದಿಂದ ಸುಳ್ಳು ಆರೋಪ ಹೊರಿಸುವುದು) 218 (ಶಿಕ್ಷೆ ತಪ್ಪಿಸುವ ಸಲುವಾಗಿ ತಪ್ಪು ದಾಖಲೆ ನೀಡುವುದು) 120 ಬಿ (ಕ್ರಿಮಿನಲ್‌ ಸಂಚು ರೂಪಿಸುವುದು) ದಾಖಲಿಸಲಾಗಿದೆ.

ತೀಸ್ತಾ ಸೆಟಲ್ವಾಡ್ ಅವರ ಬಂಧನದ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ದೇಶದ ಹಲವೆಡೆ ಪ್ರತಿಭಟನೆ ನಡೆಯುವ ಸಾಧ್ಯತೆಯೂ ಕಂಡು ಬರುತ್ತಿದೆ.



Join Whatsapp