ಅಹಮದಾಬಾದ್: ನಕಲಿ ಮದ್ಯ ದುರಂತದಲ್ಲಿ 42 ಮಂದಿ ಸಾವನ್ನಪ್ಪಿದ್ದು, ಇದಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆ ಗುಜರಾತಿನ ಬೊಟಾಡ್ ಮತ್ತು ಅಹಮದಾಬಾದ್ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳನ್ನು ವರ್ಗಾವಣೆ ಮಾಡಿ, ಆರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ ಎಂದು ಹಿರಿಯ ಅಧಿಕಾರೊಯೊಬ್ಬರು ತಿಳಿಸಿದ್ದಾರೆ.
ಬೊಟಾಡ್ ಎಸ್ಪಿ ಕರಂ ರಾಜ್ ವಘೇಲಾ ಮತ್ತು ಅಹಮದಾಬಾದ್ ಎಸ್ಪಿ ವಿರೇಂದ್ರ ಸಿಂಗ್ ಯಾದವ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಅಲ್ಲದೆ ಇಬ್ಬರು ಉಪ ಎಸ್ಪಿಗಳು, ಸರ್ಕಲ್ ಇನ್ಸ್’ಪೆಕ್ಟರ್, ಪೊಲೀಸ್ ಇನ್ಸ್’ಪೆಕ್ಟರ್ ಮತ್ತು ಇಬ್ಬರು ಸಬ್ ಇನ್ಸ್’ಪೆಕ್ಟರ್ ಸೇರಿದಂತೆ ಆರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಜುಲೈ 25 ರಂದು ಬೊಟಾಡ್’ನಲ್ಲಿ ನಕಲಿ ಮದ್ಯ ಸೇವಿಸಿ ಸ್ಥಳೀಯ ಮತ್ತು ನೆರೆಯ ಅಹಮದಾಬಾದ್ ಜಿಲ್ಲೆಯ 42 ಮಂದಿ ಸಾವನ್ನಪ್ಪಿದ್ದಾರೆ ಎಂದು ಗೃಜ ಖಾತೆ ರಾಜ್ಯ ಸಚಿವ ಹರ್ಷ ಸಂಘವಿ ತಿಳಿಸಿದ್ದಾರೆ. ಅಲ್ಲದೆ ಘಟನೆಯಲ್ಲಿ ಕನಿಷ್ಠ 97 ಜನರನ್ನು ಭಾವನಗರ, ಬೊಟಾಡ್ ಮತ್ತು ಅಹಮದಾಬಾದ್’ನ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.