ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ ಕೋರಿ ಪಿಐಎಲ್: ರಾಜ್ಯ ಸರ್ಕಾರಕ್ಕೆ ಗುಜರಾತ್ ಹೈಕೋರ್ಟ್ ನೋಟಿಸ್

Prasthutha|

ಅಹ್ಮದಾಬಾದ್: ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ನಿಷೇಧಿಸುವುದನ್ನು ಪರಿಗಣಿಸುವಂತೆ ಗುಜರಾತ್ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ಮಂಗಳವಾರ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.

- Advertisement -

ಗುಜರಾತ್ ನ  ಗಾಂಧಿನಗರ ಜಿಲ್ಲೆಯ ವೈದ್ಯ ಧರ್ಮೇಂದ್ರ ವಿಷ್ಣುಭಾಯ್ ಸಲ್ಲಿಸಿದ ಮನವಿಯ ಮೇರೆಗೆ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಅಶುತೋಷ್ ಜೆ ಶಾಸ್ತ್ರಿ ಅವರಿದ್ದ ವಿಭಾಗೀಯ ಪೀಠ ನೋಟಿಸ್ ಜಾರಿ ಮಾಡಿದೆ.

80 ಡೆಸಿಬಲ್ ಗಳವರೆಗೆ ಶಬ್ದಗಳನ್ನು ಅನುಮತಿಸಲಾಗಿದೆ. ಆದರೆ ಮಸೀದಿಗಳು 200 ಡೆಸಿಬಲ್ ಗಿಂತ ಹೆಚ್ಚಿನ ಧ್ವನಿಯೊಂದಿಗೆ ಧ್ವನಿವರ್ಧಕಗಳನ್ನು ಬಳಸುತ್ತಿವೆ ಎಂದು ನ್ಯಾಯಾಲಯದ ಪ್ರಶ್ನೆಯೊಂದಕ್ಕೆ ಅರ್ಜಿದಾರರು ಉತ್ತರಿಸಿದರು. ಚರ್ಚ್ ಆಫ್ ಗಾಡ್ (ಫುಲ್ ಗಾಸ್ಪೆಲ್) ಇನ್ ಇಂಡಿಯಾ ಮತ್ತು ಕೆಕೆಆರ್ ಮೆಜೆಸ್ಟಿಕ್ ಕಾಲೋನಿ ಕಲ್ಯಾಣ ಸಂಘ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಆಧರಿಸಿ ಅರ್ಜಿದಾರರು ವಾದ ಮಂಡಿಸಿದರು.

- Advertisement -

ಧ್ವನಿವರ್ಧಕಗಳ ಬಳಕೆಯಿಂದ ಸಾರ್ವಜನಿಕರಿಗೆ ಭಾರೀ ತೊಂದರೆ ಉಂಟಾಗುತ್ತದೆ ಮತ್ತು ನಾಗರಿಕರು ತಾವು ಕೇಳಲು ಇಚ್ಛಿಸದ ಯಾವುದನ್ನೂ ಕೇಳಲು ಒತ್ತಾಯಿಸಬಾರದು ಎಂದು ಕೋರಲಾಯಿತು. “ಇಸ್ಲಾಂ ಧರ್ಮವನ್ನು ನಂಬದ ಜನರು ಮಸೀದಿಯಿಂದ ಇಂತಹ ಶಬ್ದ ಮಾಲಿನ್ಯವನ್ನು ಏಕೆ ಆಲಿಸಬೇಕು? ಗಣಪತಿ ಹಬ್ಬದ ಸಮಯದಲ್ಲಿ ಧ್ವನಿವರ್ಧಕಗಳ ಬಳಕೆಗೆ ನಿರ್ಬಂಧವಿದ್ದು ಅದನ್ನೇ ಮಸೀದಿಗಳಿಗೂ ಏಕೆ ಅನ್ವಯಿಸಬಾರದು,” ಎಂದು ಅರ್ಜಿದಾರರು ಪ್ರಶ್ನಿಸಿದರು. ವಾದ ಆಲಿಸಿದ ನ್ಯಾಯಾಲಯ ಮಾರ್ಚ್ 10ರೊಳಗೆ ಉತ್ತರಿಸುವಂತೆ ಸೂಚಿಸಿ ಸರ್ಕಾರಕ್ಕೆ ನೋಟಿಸ್ ನೀಡಿತು.

(ಕೃಪೆ: ಬಾರ್ & ಬೆಂಚ್)

Join Whatsapp