ಗುಜರಾತ್ ಚುನಾವಣೆ: ಬಿಜೆಪಿ ಹೈಕಮಾಂಡ್ ವಿರುದ್ಧ ಮುಖಂಡರ, ಕಾರ್ಯಕರ್ತರ ಅಸಮಾಧಾನ

Prasthutha|

ಗಾಂಧಿನಗರ: 182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ನಡೆಯುವ ಚುನಾವಣೆಗೆ ಬಿಜೆಪಿಯು ಎರಡು ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಪಕ್ಷದ ಹೈಕಮಾಂಡ್ ಮಾಡಿದ ಆಯ್ಕೆಗೆ ರಾಜ್ಯ ನಾಯಕರು ಮತ್ತು ಕಾರ್ಯಕರ್ತರು ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ. ಈ ಪೈಕಿ ಕೆಲವರು ಬಂಡಾಯವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

- Advertisement -

ಮುಂದಿನ ಚುನಾವಣೆಗೆ ಬಿಜೆಪಿ ಪಕ್ಷವು ಎರಡು ಹಂತಗಳಲ್ಲಿ 160 ಅಭ್ಯರ್ಥಿಗಳನ್ನು ಘೋಷಿಸಿದ್ದು, ಇನ್ನೂ 22 ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಬೇಕಾಗಿದೆ.

ವಡೋದರದ ವಘೋಡಿಯಾ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಮಧು ಶ್ರೀವಾಸ್ತವ್ ಆರು ಅವಧಿಗೆ ಶಾಸಕರಾಗಿ ಸೇವೆ ಸಲ್ಲಿಸಿದ್ದರೂ ಕೂಡ ಅವರನ್ನು ಬಿ ಫಾರಂನಿಂದ ಕೈಬಿಡಲಾಗಿದೆ. ಅವರ ಸ್ಥಾನಕ್ಕೆ ಬಿಜೆಪಿ ಅಶ್ವಿನ್ ಪಟೇಲ್ ಅವರನ್ನು ಸೂಚಿಸಿದೆ. ಈ ನಿಟ್ಟಿನಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮಧು ಶ್ರೀವಾಸ್ತವ್ ನಿರ್ಧರಿಸಿದ್ದಾರೆ.

- Advertisement -

ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಶ್ರೀವಾಸ್ತವ್, ಪಕ್ಷದ ನಾಯಕತ್ವದಿಂದ ಒಪ್ಪಿಗೆ ಪಡೆದ ನಂತರವೇ ನಾಮಪತ್ರ ಸಲ್ಲಿಸಿದ್ದೇನೆ. ಏಕಾಏಕಿ ಪಕ್ಷ ತನ್ನ ನಿರ್ಧಾರ ಬದಲಿಸಿದೆ. ನನ್ನ ಬೆಂಬಲಿಗರು ಪಕ್ಷದ ನಿರ್ಧಾರದಿಂದ ಕೋಪಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.

ಈ ಪರಿಸ್ಥಿತಿ ರಾಜ್ಯದ ಇತರ ಕಡೆಗಳಲ್ಲಿಯೂ ಮುಂದುವರಿದಿದ್ದು, ಬಿಜೆಪಿಯ ಹೈಕಮಾಂಡ್ ಲೆವಲಿನ ನಾಯಕರ ನಡೆಯ ವಿರುದ್ಧ ಅನೇಕರು ಬಂಡಾಯದ ಬಾವುಟ ಹಾರಿಸಿದ್ದಾರೆ. ಅಲ್ಲದೆ ಹಲವು ಕಾರ್ಯಕರ್ತರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದನ್ನು ಶಮನಗೊಳಿಸುವಲ್ಲಿ ಬಿಜೆಪಿ ಅನೇಕ ಸಮಿತಿಯನ್ನು ರಚಿಸಿ, ಮನವೊಲಿಸಲು ಮುಂದಾಗಿದೆ.

Join Whatsapp