ಹಿಂದೂ ಹುಡುಗಿಯರನ್ನು‌ ಮೋಸದ ಜಾಲದಲ್ಲಿ ಸಿಲುಕಿಸುವವರ ವಿರುದ್ಧ ಕಠಿಣ ಕ್ರಮ: ಗುಜರಾತ್ ಮುಖ್ಯಮಂತ್ರಿ

Prasthutha|

ಅಹಮದಾಬಾದ್: ಹಿಂದೂ ಹುಡುಗಿಯರನ್ನು ಮೋಸದ ಜಾಲದಲ್ಲಿ ಸಿಲುಕಿಸುವವರಿಗೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಎಚ್ಚರಿಕೆ ನೀಡಿದ್ದಾರೆ.

ಅಹಮದಾಬಾದ್‌ನ ವೈಷ್ಣೋದೇವಿಯ ಮಾಲ್ದಾರಿ ಸಮುದಾಯವನ್ನು(ಜಾನುವಾರುಗಳನ್ನು ಸಾಕುವವರು) ಉದ್ದೇಶಿಸಿ ಮಾತನಾಡಿದ ವಿಜಯ್ ರೂಪಾನಿ, ಗೋಹತ್ಯೆ ವಿರುದ್ಧವೂ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

- Advertisement -

 “ಗೋಹತ್ಯೆಯಿಂದ ಹಸುಗಳನ್ನು ರಕ್ಷಿಸುವ ಕಾನೂನು, ಭೂ ಅತಿಕ್ರಮಣವನ್ನು ತಡೆಯುವ ಕಾನೂನು ಅಥವಾ ಸರಗಳ್ಳತನ ತಡೆಯುವ ಕಾನೂನು ಸೇರಿದಂತೆ ನನ್ನ ಸರ್ಕಾರ ಕಠಿಣ ಕ್ರಮಗಳೊಂದಿಗೆ ಹಲವು ಕಾನೂನುಗಳನ್ನು ತಂದಿದೆ” ಎಂದು ಅವರು ಹೇಳಿದರು.

‘ಲವ್ ಜಿಹಾದ್’ ತಡೆಯಲು ನಾವು ಕಠಿಣ ಕಾನೂನು ತಂದಿದ್ದೇವೆ. ಹಿಂದೂ ಹುಡುಗಿಯರನ್ನು ಮೋಸದ ಜಾಲದಲ್ಲಿ ಸಿಲುಕಿಸಿ ಅವರ ಜೊತೆ ಓಡಿಹೋಗುವವರ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳಲಿದ್ದೇವೆ ಎಂದು ವಿಜಯ್ ರೂಪಾನಿ ಹೇಳಿದರು.

ಕಳೆದ ಏಪ್ರಿಲ್ ನಲ್ಲಿ ಗುಜರಾತ್ ಸರ್ಕಾರ ಬಲವಂತದ ಮತಾಂತರದ ಮೂಲಕ ವಿವಾಹವಾಗುವವರ ವಿರುದ್ಧ ಕಾನೂನನ್ನು ಜಾರಿಗೆ ತಂದಿತ್ತು. ಗುಜರಾತ್ ಶಾಸಕಾಂಗವು ‘ಫ್ರೀಡಂ ಆಫ್ ರಿಲೀಜಿಯನ್ ಆ್ಯಕ್ಟ್’ 2003 ರ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿತ್ತು. ಇನ್ನು ಮುಂದೆ ಮದುವೆಯ ಭಾಗವಾಗಿ ಮತಾಂತರಗೊಳಿಸುವುದನ್ನು ಬಲವಂತ ಮತಾಂತರದ ಅಪರಾಧವೆಂದು ಪರಿಗಣಿಸಲಾಗುವುದು. ಇದಕ್ಕೆ ಮೂರರಿಂದ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ. ದಂಡ ವಿಧಿಸಲಾಗುವುದು.

- Advertisement -