ಅಹಮದಾಬಾದ್: ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ)ದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಇಸುದನ್ ಗಧ್ವಿ ಅವರನ್ನು ಘೋಷಿಸಲಾಗಿದೆ.
ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರ ಈ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ.
ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5ರಂದು ಎರಡು ಹಂತದಲ್ಲಿ ಮತದಾನ ನಡೆಯಲ್ಲಿದ್ದು, ಡಿಸೆಂಬರ್ 8ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಚುನಾವಣಾ ಆಯೋಗ ಈಗಾಗಲೇ ತಿಳಿಸಿದೆ.
ಗುಜರಾತಿನ ಜನರ ಅಭಿಮತಗಳನ್ನು ಅಳೆದು ತೂಗಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದ್ದಾಗಿ ಕೇಜ್ರೀವಾಲ್ ಹೇಳಿದ್ದಾರೆ.
ರಾಜ್ಯದಲ್ಲಿ ನಮ್ಮ ಪಕ್ಷದ ಯಾರನ್ನು ಮುಖ್ಯಮಂತ್ರಿಯಾಗಿ ನೋಡಲು ನೀವು ಬಯಸುತ್ತೀರಿ ಎಂಬ ಪ್ರಶ್ನೆ ಕೇಳಿ ಎಸ್ ಎಂಎಸ್, ವಾಟ್ಸಪ್, ವಾಯ್ಸ್ ಮೇಲ್, ಮಿಂಚಂಚೆ ಮೂಲಕ ಪಕ್ಷದ ಕಚೇರಿಗೆ ಅಭಿಪ್ರಾಯ ತಿಳಿಸುವಂತೆ ಅಕ್ಟೋಬರ್ 29ರಂದು ಆಮ್ ಆದ್ಮಿ ಪಕ್ಷವು ಹೇಳಿಕೆ ನೀಡಿತ್ತು.
ಅಕ್ಟೋಬರ್ 29ರ ಮೊದಲ ದಿನವೇ 15 ಲಕ್ಷ ಜನರು ಅಭಿಪ್ರಾಯ ತಿಳಿಸಿದ್ದಾರೆ ಎಂದು ಎಎಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಈಸುದಾನ್ ಗಾದ್ವಿ ಹೇಳಿದ್ದಾರೆ.
ಹಾಗಾದರೆ ನೀವೇ ಮುಖ್ಯಮಂತ್ರಿಯೇ ಎಂಬ ಪ್ರಶ್ನೆಗೆ ಆಗ ಅವರು “ನಾನು ಪಕ್ಷದ ಸೈನಿಕ. ನಾವು ತಂಡವಾಗಿ ಕೆಲಸ ಮಾಡುತ್ತಿದ್ದೇವೆ. ಯಾರೂ ನಾನಾಗಬೇಕೆಂದು ಹೇಳಿಲ್ಲ. ಜನರ ಅಭಿಪ್ರಾಯದ ಮೇಲೆ ನಮ್ಮ ನಾಯಕ ಅರವಿಂದ ಕೇಜ್ರೀವಾಲ್ ಹೇಳುತ್ತಾರೆ” ಎಂದಿದ್ದರು. ಆದರೆ ಇದೀಗ ಅವರ ಹೆಸರು ಅಂತಿಮಗೊಂಡಿದೆ.
ಚುನಾವಣಾ ಆಯೋಗವು ನಿನ್ನೆ ಎರಡು ಹಂತಗಳಲ್ಲಿ ಗುಜರಾತಿನಲ್ಲಿ ಮತದಾನ ಘೋಷಿಸಿದೆ. ಡಿಸೆಂಬರ್ 8ರಂದು ಹಿಮಾಚಲ ಪ್ರದೇಶ ಮತ್ತು ಗುಜರಾತ್ ಚುನಾವಣೆಗಳ ಮತ ಎಣಿಕೆಯು ಒಂದೇ ದಿನದಲ್ಲಿ ನಡೆದು ಫಲಿತಾಂಶ ಪ್ರಕಟವಾಗಲಿದೆ.
ರಾಜ್ಯ ಎಎಪಿ ಅಧ್ಯಕ್ಷ ಗೋಪಾಲ್ ಇತಾಲಿಯಾ, ಪ್ರಧಾನ ಕಾರ್ಯದರ್ಶಿ ಮನೋಜ್ ಸೊರಾತಿಯಾ ಹೆಸರು ಸಹ ಮುಖ್ಯಮಂತ್ರಿ ಹುದ್ದೆಗೆ ಚಾಲ್ತಿಯಲ್ಲಿತ್ತು.