ಅಹಮದಾಬಾದ್: ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಆಘಾತವಾಗಿದ್ದು, ಪಕ್ಷದಿಂದ ವಿಧಾನ ಸಭಾ ಚುನಾವಣೆಗೆ ನಿಂತು ಗೆಲುವು ಕಂಡಿದ್ದ ಭೂಪೇಂದ್ರ ಭಯಾನಿ ಶಾಸಕತ್ವ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಭೂಪೇಂದ್ರ, ಜನ ಸೇವೆ ಮಾಡಲು ಆಪ್ ಸರಿಯಾದ ವೇದಿಕೆಯಲ್ಲ. ಬಿಜೆಪಿ ಸರಿಯಾದ ವೇದಿಕೆ. ಆಡಳಿತಾರೂಢ ಬಿಜೆಪಿಗೆ ಸೇರುತ್ತೇನೆ ಎಂದು ಹೇಳಿದ್ದಾರೆ.
ಜುನಾಗಢ ಜಿಲ್ಲೆಯ ವಿಸಾವದರ್ ಕ್ಷೇತ್ರದ ಶಾಸಕರಾಗಿದ್ದ ಭೂಪೇಂದ್ರ ಭಯಾನಿ ಅವರು ಸ್ಪೀಕರ್ ಶಂಕರ್ ಚೌಧರಿ ಅವರಿಗೆ ರಾಜೀನಾಮೆ ನೀಡಿದ್ದು, ನಿರ್ಧಾರದ ಹಿಂದೆ ಯಾವುದೇ ಕಾರಣವನ್ನು ಉಲ್ಲೇಖಿಸಿಲ್ಲ.
ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದ್ದಾರೆ ಎಂದು ಗುಜರಾತ್ ವಿಧಾನಸಭಾ ಕಾರ್ಯದರ್ಶಿ ಡಿಎಂ ಪಟೇಲ್ ಹೇಳಿದ್ದಾರೆ.
ಕಳೆದ ವರ್ಷದ ರಾಜ್ಯ ಚುನಾವಣೆಯಲ್ಲಿ ಆಪ್ ಪಕ್ಷ ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಐವರು ಆಪ್ ಶಾಸಕರ ಪೈಕಿ ಭೂಪೇಂದ್ರ ಭಯಾನಿ ಒಬ್ಬರಾಗಿದ್ದರು.
182 ಸದಸ್ಯ ಬಲದ ವಿಧಾನಸಭೆಯಲ್ಲಿ 156 ಸ್ಥಾನಗಳನ್ನು ಪಡೆದ ಬಿಜೆಪಿ
ಭಾರಿ ಬಹುಮತದೊಂದಿಗೆ ಅಧಿಕಾರ ಮರಳಿ ಪಡೆದಿತ್ತು.