ನವದೆಹಲಿ: ಕ್ರಿಕೆಟ್ ಅಭಿಮಾನಿಗಳಿಗೆ ಭಾರಿ ದೊಡ್ಡ ಗುಡ್ ನ್ಯೂಸ್ ಸಿಕ್ಕಿದೆ. ಅಮೆರಿಕದ ಲಾಸ್ ಏಂಜಲಿಸ್‌ನಲ್ಲಿ 2028ಕ್ಕೆ ನಡೆಯಲಿರುವ ಜಾಗತಿಕ ಕ್ರೀಡಾಹಬ್ಬ ಒಲಿಂಪಿಕ್ಸ್‌ಗೆ ಕೊನೆಗೂ ಕ್ರಿಕೆಟ್ ಸೇರ್ಪಡೆಯಾಗಿದೆ. ಒಂದು ಶತಮಾನಕ್ಕಿಂತಲೂ ಹೆಚ್ಚು ವರ್ಷಗಳ ಕಾಲ ಒಲಿಂಪಿಕ್ಸ್ ಕ್ರೀಡೆಗಳ ಪಟ್ಟಿಯಿಂದ ದೂರ ಉಳಿದಿದ್ದ ಕ್ರಿಕೆಟ್ ಮತ್ತೆ ಒಲಿಂಪಿಕ್ಸ್ ಗೆ ಸೇರ್ಪಡೆಯಾಗಿದೆ.
ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಒಲಿಂಪಿಕ್ಸ್ ಕ್ರೀಡೆಯಲ್ಲಿ ಕ್ರಿಕೆಟ್ ಸೇರ್ಪಡೆಗೊಳಿಸಿರುವುದಾಗಿ ಘೋಷಣೆ ಮಾಡಿದೆ.
ಒಲಿಂಪಿಕ್ಸ್ ಸಮಿತಿಯ ಕಾರ್ಯಕಾರಿ ಮಂಡಳಿ ಸಭೆ ಮುಂಬೈನಲ್ಲಿ ನಡೆದಿತ್ತು. ಈ ಸಭೆ ನಡೆದ 2 ದಿನಗಳ ಬಳಿಕ ಮಾತನಾಡಿದ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಅಧ್ಯಕ್ಷ ಥಾಮಸ್ ಬಾಚ್, ಬೇಸ್‌ಬಾಲ್ ಅಥವಾ ಸಾಫ್ಟ್‌ಬಾಲ್, ಫ್ಲ್ಯಾಗ್ ಫುಟ್‌ಬಾಲ್ ಜೊತೆಗೆ ಹೊಸ 5 ಹೊಸ ಕ್ರೀಡೆಗಳನ್ನು ಒಲಿಂಪಿಕ್ಸ್‌ಗೆ ಸೇರ್ಪಡೆಗೊಳಿಸಲಾಗಿದೆ ಎಂದಿದ್ದಾರೆ. ಇದರಲ್ಲಿ ಕ್ರಿಕೆಟ್ ಸಹ ಒಂದಾಗಿದೆ.
ಒಲಂಪಿಕ್ ಕ್ರೀಡಾಕೂಟಕ್ಕೆ ಕ್ರಿಕೆಟ್ ಅನ್ನು ಸೇರ್ಪಡೆಗೊಳಿಸುವ ಪ್ರಸ್ತಾವನೆಯನ್ನು ಅಮೇರಿಕಾದ ಲಾಸ್ ಏಂಜಲಿಸ್‌ನ ಸಂಘಟಕರು ಕೂಡಾ ಒಪ್ಪಿಕೊಂಡಿದ್ದಾರೆ ಎಂಬುದಾಗಿಯೂ ಅವರು ತಿಳಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 1900 ರಂದು ಕ್ರಿಕೆಟ್ ಆಡಲಾಗಿದ್ದು ಆಗ ಅದು ಪದಕ ಸ್ಪರ್ಧೆಯಾಗಿತ್ತು. ಆಗ ಇಂಗ್ಲೆಂಡ್ -ಫ್ರಾನ್ಸ್ ಪುರುಷರ ತಂಡಗಳ ನಡುವೆ ಏಕೈಕ ಪಂದ್ಯ ನಡೆದಿದ್ದು, ಬ್ರಿಟನ್ ಅದರಲ್ಲಿ ಗೆಲುವು ಪಡೆದಿತ್ತು. ಆನಂತರ ಒಂದು ಶತಮಾನಗಳ ಕಾಲ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಕಾಣಿಸಿಕೊಂಡಿರಲಿಲ್ಲ.
ಆದರೆ 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ ನಲ್ಲಿ ಪುರುಷರು ಮತ್ತು ಮಹಿಳೆಯರ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ತಂಡಗಳು ಭಾಗವಹಿಸಲಿವೆ. ಕಳೆದ ವರ್ಷ ಬರ್ಮಿಂಗ್ ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಹಿಳಾ ಕ್ರಿಕೆಟ್ ಆಟದ ಭಾಗವಾಗಿತ್ತು ಎಂಬುದು ಗಮನಾರ್ಹ ಸಂಗತಿ. ಒಲಂಪಿಕ್ ಪಂದ್ಯದಲ್ಲಿ ಟಿ20 ಮಾದರಿಯ ಕ್ರಿಕೆಟ್ ಆಡಲಾಗುತ್ತದೆ.
ಈಗಿರುವ ಬಲ್ಲ ಮಾಹಿತಿಗಳ ಪ್ರಕಾರ, 2024ರ ಟಿ20 ವಿಶ್ವಕಪ್ ಟೂರ್ನಿಯು ಮುಂದಿನ ಜೂನ್ 4 ರಿಂದ ಜೂನ್ 30ರ ವರೆಗೆ ನಡೆಯಲಿದೆ. ಈಗಾಗಲೇ ಐಸಿಸಿ ಅಧಿಕಾರಿಗಳು ಅಮೆರಿಕದಲ್ಲಿ ಆತಿಥ್ಯ ವಹಿಸುವ ಸಂಭಾವ್ಯ ಸ್ಥಳಗಳ ಪರಿಶೀಲನೆ ನಡೆಸಿದ್ದಾರೆ. ಈ ಮಧ್ಯೆ 2028ರ ಒಲಿಂಪಿಕ್ಸ್ ನಲ್ಲಿ ಬಾಕ್ಸಿಂಗ್ ಸ್ಪರ್ಧೆ ಇರುವುದು ಅನಿಶ್ಚಿತ. ಬಾಕ್ಸಿಂಗ್ ಸ್ಪರ್ಧೆ ಯಾಕೆ ಅನಿಶ್ಚಿತ ಎಂದರೆ ಈ ಸ್ಪರ್ಧೆ ಎಂದು ಯಾವ ರೀತಿ ಗವರ್ನ್ ಮಾಡಬೇಕು ಎನ್ನುವ ಅನಿಶ್ಚಿತತೆ ಮೂಡಿದೆ ಎಂದು ಒಲಿಂಪಿಕ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.