ಮೈಸೂರಿನಲ್ಲಿ ನಾಳೆ ಪಂಚರತ್ನ ರಥಯಾತ್ರೆಯ ಬೃಹತ್ ಸಮಾರೋಪ ಸಮಾವೇಶ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭಾಗಿ

Prasthutha|

ಮೈಸೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷಿಯ ಪಂಚರತ್ನ ರಥಯಾತ್ರೆಯ ಬೃಹತ್ ಸಮಾರೋಪ ಸಮಾವೇಶ ನಾಳೆಯ ದಿನ (ಭಾನುವಾರ) ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯಲಿದೆ.
ಈಗಾಗಲೇ ಮೈಸೂರಿನಲ್ಲಿ ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭದ ಸಿದ್ದತೆ ಬಹುತೇಕ ಪೂರ್ಣವಾಗಿದ್ದು, ನಗರದ ಉತ್ತನಹಳ್ಳಿ ರಿಂಗ್ ರಸ್ತೆಯ ನೂರು ಎಕರೆ ಪ್ರದೇಶದ ವಿಶಾಲ ಮೈದಾನದಲ್ಲಿ ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಸ್ವತಃ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ತಿಳಿಸಿದ್ದಾರೆ.

- Advertisement -


ಸಮಾರಂಭಕ್ಕೂ ಮೊದಲು ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಬಳಿಯ ರಿಂಗ್ ರಸ್ತೆಯಿಂದ ಬೃಹತ್ ರೋಡ್ ಶೋ ನಡೆಯಲಿದೆ. ಈ ರೋಡ್ ಶೋ ನಲ್ಲಿ ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರು, ಜೆಡಿಎಸ್ ರಾಜ್ಯಾಧ್ಯಕ್ಷರಾದ ಸಿ.ಎಂ.ಇಬ್ರಾಹಿಂ ಅವರು ಸೇರಿದಂತೆ ಪಕ್ಷದ ಎಲ್ಲ ಶಾಸಕರು, ಎಲ್ಲ ಅಭ್ಯರ್ಥಿಗಳು ಭಾಗಿಯಾಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ತಿಳಿಸಿದ್ದಾರೆ.


ರಾಜ್ಯ ರಾಜಕಾರಣದಲ್ಲಿ ಐತಿಹಾಸಿಕ ಸಮಾವೇಶ ಆಗಿರುವ ಈ ಜೆಡಿಎಸ್ ಹಬ್ಬದಲ್ಲಿ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಸಮಾವೇಶಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ವಿಶಾಲ ಮೈದಾನದಲ್ಲಿ ಕೂರಲು ಆಸನದ ವ್ಯವಸ್ಥೆ, ಊಟ ಹಾಗೂ ಕುಡಿಯುವ ನೀರಿನ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ ಎಂದು ಕುಮಾರಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.

- Advertisement -


ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಝಗಮಗಿಸುವ ವಿದ್ಯುತ್ ಬೆಳಕಿನ ಅಲಂಕಾರ ಮಾಡಲಾಗಿದ್ದು, 100×50 ಅಡಿಯ ವಿಶಾಲ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ. ವೇದಿಕೆಗೆ ಅಚ್ಚುಕಟ್ಟಾದ ವಿದ್ಯುತ್ ದೀಪದ ಮೆರಗು ನೀಡಲಾಗಿದ್ದು, ಮೈದಾನದ ಯಾವುದೇ ಭಾಗದಿಂದಲೂ ವೇದಿಕೆ ಕಾರ್ಯಕ್ರಮ ನೋಡಲು ಸಾಧ್ಯ ಆಗುವಂತೆ ಬೃಹತ್ ಎಲ್ ಇ ಡಿ ಪರದೆಗಳನ್ನು ಅಳವಡಿಸಲಾಗಿದೆ.


ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿ ನೆಲೆಸಿರುವ ಚಾಮುಂಡಿಬೆಟ್ಟದ ತಪ್ಪಲಲ್ಲಿ ನಡೆಯುತ್ತಿರುವ ಪಂಚರತ್ನ ಸಮಾರೋಪ ಸಮಾವೇಶಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಜನರು, ಕಾರ್ಯಕರ್ತರು ಬರುತ್ತಿದ್ದಾರೆ. ಮೈಸೂರಿನಲ್ಲಿ ನಡೆಯುತ್ತಿರುವ ಈ ಜೆಡಿಎಸ್ ಹಬ್ಬಕ್ಕೆ ಭರ್ಜರಿ ಜನ ಸ್ಪಂದನೆ ಸಿಗುತ್ತಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.



Join Whatsapp