ಮೈಸೂರು : ರಾಜ್ಯದಲ್ಲಿ ಎರಡು ಹಂತದಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ ಪ್ರಕಟನೆ ಆರಂಭಗೊಂಡಿದ್ದು, ಮತ ಎಣಿಕೆ ಭರದಿಂದ ಸಾಗಿದೆ. ಈ ನಡುವೆ, ಮೈಸೂರಿನಲ್ಲಿ ಕರ್ತವ್ಯನಿರತ ಚುನಾವಣಾಧಿಕಾರಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಪಿರಿಯಾಪಟ್ಟಣದ ಪುಷ್ಪಾ ಕಾನ್ವೆಂಟ್ ಮತ ಎಣಿಕೆ ಕೇಂದ್ರದಲ್ಲಿ ಎನ್. ಶೆಟ್ಟಹಳ್ಳಿ ಗ್ರಾ.ಪಂ. ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬೋರೇಗೌಡ (52) ಸಾವಿಗೀಡಾಗಿದ್ದಾರೆ. ಕರ್ತವ್ಯದಲ್ಲಿದ್ದಾಗಲೇ ಎದೆ ನೋವು ಕಾಣಿಸಿಕೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ ಎಂದು ವರದಿಗಳು ತಿಳಿಸಿವೆ.