ಯಾದರಿಗಿ: ಬಿಜೆಪಿ ಬೆಂಬಲಿತ ‘ನಮೋ ಬ್ರಿಗೇಡ್’ ಸಂಘಟನೆಯ ಹೊಸ ರೂಪವಾಗಿರುವ ‘ಯುವಾ ಬ್ರಿಗೇಡ್’ ನಡೆಸುವ ಕಾರ್ಯಕ್ರಮಕ್ಕೆ, ಯಾದಗಿರಿಯ ಜಿಲ್ಲೆಯ ಶಾಲಾ ಶಿಕ್ಷಕರು ಭಾಗವಹಿಸುವಂತೆ ಅಲ್ಲಿನ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ (ಸಿಇಒ) ಅಧಿಕಾರಿ ಶಿಲ್ಪಾ ಶರ್ಮಾ ಸುತ್ತೋಲೆ ಹೊರಡಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿದ್ದು, ಶಿಕ್ಷಕರು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುವಾ ಬ್ರಿಗೇಡ್ ಕಾರ್ಯಕ್ರಮಕ್ಕೆ ಜಿಲ್ಲೆಯ ಶಾಲೆಗಳಿಂದ ಒಬ್ಬ ಅಥವಾ ಇಬ್ಬರು ಶಿಕ್ಷಕರನ್ನು ಕಳುಹಿಸಬೇಕು. ಜೊತೆಗೆ ಭಾಗವಹಿಸುವ ಶಿಕ್ಷಕರಿಗೆ ನಿಯಮಾನುಸಾರ ಕರ್ತವ್ಯಯ ಅವಧಿ ಎಂದು ಪರಿಗಣಿಸಬೇಕು ಎಂದು ಸಿಇಒ ಶಿಲ್ಪಾ ಶರ್ಮಾ ಅವರು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಯಾದಗಿರಿ ನಗರದಲ್ಲಿ ಗುರುವಾರದಂದು ‘ಪ್ರೇರಣಾ ಪ್ರವಾಹ’ ಎಂಬ ಕಾರ್ಯಾಗಾರವನ್ನು ಶಿಕ್ಷಕ-ಶಿಕ್ಷಕಿಯರನ್ನು ಗುರಿಯಾಗಿಸಿ ನಡೆಸುತ್ತಿದೆ. ವಿಶೇಷವೇನೆಂದರೆ ಯಾದಗಿರಿ ಜಿಲ್ಲಾಧಿಕಾರಿ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಶಿಕ್ಷಕರು ಭಾಗವಹಿಸಬೇಕು ಎಂದು ಸುತ್ತೋಲೆ ಹೊರಡಿಸಿರುವ ಜಿಲ್ಲಾ ಪಂಚಾಯತ್ ಸಿಇಒ ಶಿಲ್ಪಾ ಶರ್ಮಾ ಅವರು ಕಾರ್ಯಕ್ರಮ ಸಮಾರೋಪದ ಮುಖ್ಯ ಅಥಿತಿಯಾಗಿದ್ದಾರೆ. ಜೊತೆಗೆ ಬಿಜೆಪಿ ಬೆಂಬಲಿಗ ಚಕ್ರವರ್ತಿ ಸೂಲಿಬೆಲೆ ‘ಹೊಸ ಶಿಕ್ಷಣ ನೀತಿಗೆ ಸಜ್ಜಾಗೋಣ’ ಎಂಬ ರಾಜಕೀಯ ವಿಷಯದಲ್ಲಿ ಸಭೆಯಲ್ಲಿ ಮಾತನಾಡಲಿದ್ದಾರೆ.
ಈ ಕಾರ್ಯಾಗಾರಕ್ಕೆ ಜಿಲ್ಲೆಯ ಶಿಕ್ಷಕರನ್ನು ಕಳುಹಿಸಿಕೊಡಬೇಕು ಎಂದು ಯುವಾ ಬ್ರಿಗೇಡ್ ನ ಜಿಲ್ಲಾ ಸಂಚಾಲಕರಾದ ಶ್ರೀಕಾಂತ ಹಳ್ಳಿ ಎಂಬವರು ಜಿಲ್ಲಾ ಪಂಚಾಯತ್ ಗೆ ಮನವಿ ಮಾಡಿದ್ದರಿಂದ, ಸಿಇಒ ಅದನ್ನು ಪರಿಗಣಿಸಿ ಸುತ್ತೋಲೆ ಹೊರಡಿಸಿದ್ದಾರೆ ಎನ್ನಲಾಗಿದೆ.
ಈ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಹೆಸರು ಹೇಳಲಿಚ್ಛಿಸದ ಶಿಕ್ಷಕರೊಬ್ಬರು ಆಗ್ರಹಿಸಿದ್ದಾರೆ.