ಗೋ ರಾಜಕಾರಣದ ಸುತ್ತ..!

Prasthutha|

- Advertisement -

ಸರಿ ಸುಮಾರು 1400 ವರ್ಷಗಳ ಹಿಂದೆ ಅರಬೀ ಸಮುದ್ರ ದಾಟಿ ಇಸ್ಲಾಮ್ ಭಾರತವನ್ನು ಪ್ರವೇಶಿಸಿತು. ನೂರಾರು ಧರ್ಮ ಸಂಸ್ಕೃತಿಗಳಿಗೆ ಆಶ್ರಯ ನೀಡಿದ್ದ ದೇಶ ಅಂದು ಇನ್ನೊಂದು ಧರ್ಮವನ್ನು ತನ್ನ ಮಡಿಲಿಗೆ ಸೇರಿಸಿಕೊಂಡಿತು. ಅಂದಿನಿಂದ ಭಾರತೀಯ ಮುಸ್ಲಿಮ್ ಸಮಾಜ ಆಚರಿಸಿಕೊಂಡು ಬರುತ್ತಿರುವ ತಮ್ಮ ವಿಶ್ವಾಸಾಚಾರ ಮತ್ತು ಕರ್ಮಗಳಿಗೆ ಸಾವಿರದ ನಾನೂರು ವರ್ಷಗಳ ಸುದೀರ್ಘ ಇತಿಹಾಸವಿದೆ.


ಆದರೆ ಲಾಗಾಯ್ತಿನಿಂದ ದೇಶದ ಮುಸ್ಲಿಮರ ನಂಬಿಕೆ, ಶ್ರದ್ಧೆ, ಅನುಷ್ಠಾನ ಕರ್ಮಗಳಿಂದ ಯಾವುದಾದರೂ ಸಮಾಜದ ಭಾವನೆಗೆ ಧಕ್ಕೆಯಾಗಿದೆಯೆಂದು ಹೇಳುವ ಯಾವುದೇ ನಿಷ್ಪಕ್ಷ ಐತಿಹಾಸಿಕ ಪುರಾವೆಗಳಿಲ್ಲ. ಮಾತ್ರವಲ್ಲ ಭಾರತೀಯ ಬಹರೂಪಿ ಸಮಾಜದ ಸಾಂಸ್ಕೃತಿಕ ಕೊಡು-ಕೊಳ್ಳುವಿಕೆಯ ಕಾರಣದಿಂದ ದೇಶವು ಮತ್ತಷ್ಟು ಇನ್ನಷ್ಟು ಶ್ರೀಮಂತಗೊಂಡಿದೆಯೆಂಬುದೂ ಅಷ್ಟೇ ಐತಿಹಾಸಿಕ ಸತ್ಯವಾಗಿದೆ.
ಕಳೆದ ನೂರು ವರ್ಷಗಳಲ್ಲಿ ಸಾವಿರಾರು ಸಂಚುಗಳನ್ನು ಹೆಣೆದ ಸಂಘಪರಿವಾರ ದೇಶದ ಅಧಿಕಾರದಲ್ಲಿ ಏಕಸ್ವಾಮ್ಯವನ್ನು ಸ್ಥಾಪಿಸಲು ಹಿಂದೂ ಸಮಾಜವನ್ನು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನಗಳನ್ನು ನಿರಂತರ ನಡೆಸುತ್ತಾ ಬಂದಿದೆ. ಚಾತುರ್ವರ್ಣ್ಯವನ್ನು ಖಾಯಂಗೊಳಿಸಿ ಜೈನ ಬಸದಿಗಳ ನಾಶ, ಬೌದ್ಧ ಧರ್ಮವನ್ನು ಉಪಖಂಡದಿಂದಲೇ ನಿರ್ನಾಮ ಮಾಡಿದ್ದು, ವೈದಿಕತೆಯ ವಿರುದ್ಧ ವಚನ ಸಾಹಿತ್ಯದ ಮೂಲಕ ಕ್ರಾಂತಿಯ ಕಹಳೆ ಊದಿದ ಕನ್ನಡದ ಬಸವಣ್ಣನ ಕೊಲೆ…ಇವೆಲ್ಲವೂ, ಮನುವಾದ ಸಿದ್ಧಾಂತವು ತನ್ನದಲ್ಲದ ಯಾವುದೇ ಧರ್ಮ ಸಂಸ್ಕೃತಿಯನ್ನು ಸಾಸಿವೆ ಕಾಳಿನಷ್ಟು ಸಹಿಸಿಕೊಳ್ಳದು ಎಂಬುದಕ್ಕಿರುವ ಐತಿಹಾಸಿಕ ಸತ್ಯ ಸಾಕ್ಷ್ಯಗಳಾಗಿವೆ.
ಇದೀಗ ಬಿಜೆಪಿಯ ಅಧಿಕಾರದ ಎರಡನೇ ಆಯಾಮದ ಪ್ರಸ್ತುತ ಸಂದರ್ಭದಲ್ಲಿ ಗೋ ರಾಜಕೀಯದ ಮೂಲಕ ಇನ್ನಷ್ಟು ಭದ್ರಪಡಿಸಲು ಅಪಾಯಕಾರಿ ಆಟಗಳನ್ನು ಆಡುತ್ತಿದೆ. ಒಂದೆಡೆ ಗೋಮಾಂಸ ರಫ್ತು ಮಾಡುವ ಮೂಲಕ ಕೋಟಿಗಟ್ಟಲೆ ರೂಪಾಯಿಗಳ ವಿದೇಶಿ ವಿನಿಮಯ ನಡೆಸುವ ಮೇಲ್ಜಾತಿ ಹಿಂದೂಗಳು, ಮತ್ತೊಂದೆಡೆ ಅದಕ್ಕೆ ಸವಲತ್ತುಗಳನ್ನು ನೀಡುವ ತೀವ್ರ ಹಿಂದುತ್ವದ ಸರಕಾರವಿರುವ ಉತ್ತರಪ್ರದೇಶ ಸಹಿತ ಇರುವ ಬಿಜೆಪಿ ರಾಜ್ಯ ಸರ್ಕಾರಗಳನ್ನು ನಾವು ಕಾಣುತ್ತಿದ್ದೇವೆ.
ಗೋಹತ್ಯೆಯ ಮೂಲಕ ಹಿಂದೂ ಧರ್ಮ ನಾಶವಾಗುತ್ತಿದೆ ಎಂಬುದು ಬಿಜೆಪಿ-ಸಂಘದ ಮಾಮೂಲು ಗೋಗರೆತ.
ಆದರೆ 1400 ವರ್ಷಗಳಿಂದ ಗೋಮಾಂಸ ಸಹಿತ ಇರುವ ಮಾಂಸಾಹಾರಿಗಳಿಂದ ಯಾವ ಕಾಲದಲ್ಲಿ ಹೇಗೆ ವೈದಿಕ ಧರ್ಮಕ್ಕೆ ತೊಡಕಾಯಿತೆಂದು ನಂಬಿಕಾರ್ಹ ಪುರಾವೆಗಳನ್ನು ಮುಂದಿಡಲು ಬಿಜೆಪಿ ಆರೆಸ್ಸೆಸ್ ತಯಾರಿದೆಯೇ?
ಇಲ್ಲ, ಬಿಲ್ಕುಲ್ ಸಾಧ್ಯವಿಲ್ಲ. ಏಕೆಂದರೆ ಸಂವಿಧಾನವನ್ನು ನಾಶಪಡಿಸಿ ದೇಶದ ಮೇಲೆ ಮನುವಾದವನ್ನು ಹೇರಲು ಹೊರಟ ಬಿಜೆಪಿ-ಸಂಘದ ನೂರಾರು ವಾಮ ಮಾರ್ಗಗಳಲ್ಲಿ ಅತ್ಯಂತ ಫಲವತ್ತಾದುದು ಗೋವು ಎಂಬ ಮೂಕಪ್ರಾಣಿಯಾಗಿದೆ.ದನದ ಮಾಂಸ,ಹಾಲು, ಮೂತ್ರ, ಸೆಗಣಿ, ಬೆರಣಿ, ಸತ್ತ ನಂತರ ತೊಗಲು , ಮೂಳೆ, ಕೊಬ್ಬು ಇವೆಲ್ಲವೂ ಲಾಭದಾಯಕ ಬಹುಪಯೋಗಿ ಪದಾರ್ಥಗಳಾಗಿವೆ.. ಆದುದರಿಂದಲೇ ಜಾಗತಿಕ ಮಟ್ಟದಲ್ಲಿ ಮಾಂಸ ಮತ್ತು ಹೈನು ಉತ್ಪನ್ನಗಳು ಭಾಗಶಃ ಆರ್ಥಿಕತೆಯನ್ನು ನಿಯಂತ್ರಿಸುತ್ತವೆ. ಆದರೆ ಭಾರತದಲ್ಲಿ ಗೋವು ಸಹಿತ ಇರುವ ಜಾನುವಾರುಗಳು ವಿಚಿತ್ರ ಎಂಬಂತೆ ಬಿಜೆಪಿಗೆ ಇಂದ್ರಪ್ರಸ್ಥದ ಅಧಿಕಾರವನ್ನು ಒದಗಿಸುವ ಕಲ್ಪವೃಕ್ಷವಾಗಿ ಮಾರ್ಪಟ್ಟಿದೆ. ಆದುದರಿಂದಲೇ ಮುಗ್ಧ ಹಿಂದೂಗಳ ಕಣ್ಣಿಗೆ ಮಣ್ಣೆರಚಿ ಕೇವಲ ಅಧಿಕಾರವನ್ನು ಉಳಿಸಿಕೊಳ್ಳುವ ತಂತ್ರಗಳಲ್ಲೊಂದಷ್ಟೇ ಸಂಘದ ಗೋಪ್ರೇಮ. ಅದರೊಂದಿಗೆ ಸಂವಿಧಾನ ಖಾತರಿಪಡಿಸುವ ಸ್ವಾತಂತ್ರ್ಯ- ಹಕ್ಕುಗಳನ್ನು ನಾಶಪಡಿಸಿ ಬಹುರೂಪಿ ಸಮಾಜವನ್ನು ಮನುವಾದ ಪ್ರೇರಿತ ಏಕರೂಪಿ ಸಮಾಜವನ್ನಾಗಿ ಬದಲಾಯಿಸುವುದೇ ಆರೆಸ್ಸೆಸ್ಸಿನ ದೂರಗಾಮಿ ಅಜೆಂಡಾ.
ಈ ದೇಶದ ಬಹುಜನ ಸಮಾಜವು ಕೇವಲ ಸಂವಿಧಾನದ ಮೇಲೆ ಉತ್ತರದಾಯಿತ್ವವುಳ್ಳದ್ದಾಗಿದೆ. ಅದರ ಹೊರತು ಸಂಘಪರಿವಾರ ಹೇರುವ ಸಂವಿಧಾನ ವಿರೋಧಿ,ಜೀವವರೋಧಿ ಕಾನೂನುಗಳಿಗೆ ಉತ್ತರದಾಯಿತ್ವವಾಗಿಲ್ಲ. ಮಾಂಸಾಹಾರಿಗಳನ್ನು ಬೆದರಿಸಲಿಕ್ಕಾಗಿ ಕಳೆದ ಅಧಿಕಾರಾವಧಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರವು ಗೋಹತ್ಯೆ ನಿಷೇಧ ಕಾನೂನನ್ನು ಜಾನುವಾರು ಹತ್ಯೆ ಕಾನೂನಾಗಿ ತಿದ್ದುಪಡಿಗೊಳಿಸಿತು. ಆದರೆ ಜಾನುವಾರುಗಳ ಮೂಲ ಇರುವುದು ರೈತನ ಹಟ್ಟಿ ಮತ್ತು ಗದ್ದೆ- ಬಯಲುಗಳಲ್ಲಿ. ರೈತಾಪಿ ಜನರು ತಮ್ಮ ಗದ್ದೆ, ಉಳುಮೆ, ಹೈನುಗಾರಿಕೆಯಲ್ಲಿ ಬಳಸಿದ ನಿರುಪಯೋಗಿ ಜಾನುವಾರುಗಳನ್ನು ಮಾರಾಟ ಮಾಡಿ ಕೃಷಿ ಕಾರ್ಯಗಳ ನಷ್ಟವನ್ನು ಸರಿದೂಗಿಸುತ್ತಾ ಬಂದಿದ್ದಾರೆ. ಆದರೆ ಈ ರೀತಿಯ ಹೃದಯಹೀನ ಸರ್ಕಾರಗಳ ಕುರುಡು ಕಾನೂನು ಕಾಯ್ದೆಗಳಿಂದ ಈಗಾಗಲೇ ಆತ್ಮಹತ್ಯೆಗೆ ಕೊರಳೊಡ್ಡಿದ ಲಕ್ಷಾಂತರ ರೈತರ ಪ್ರಮಾಣ ಇನ್ನಷ್ಟು ವರ್ಧನೆಯನ್ನು ಕಂಡುಕೊಳ್ಳುತ್ತದೆಯಷ್ಟೆ.
ಪ್ರಸ್ತುತ ದೇಶವು ಆರ್ಥಿಕವಾಗಿ ಬರ್ಬಾದ್ ಆದ ಅತ್ಯಂತ ದಾರುಣ ವೇಳೆಯಲ್ಲಿ ರೈತಾಪಿ ಜನರು, ದಲ್ಲಾಳಿಗಳು, ಮಾಂಸ ವ್ಯಾಪಾರಿಗಳು ತಮ್ಮ ದೈನಂದಿನ ಹೊಟ್ಟೆಪಾಡಿಗೆ ಪರಂಪರಾಗತವಾದ ಈ ದಾರಿಯನ್ನು ಕಂಡುಕೊಂಡಿದ್ದಾರಷ್ಟೆ. ಆದರೆ ಗೋಮುಖ ವ್ಯಾಘ್ರ ಬಿಜೆಪಿ ಸರಕಾರ ಧರ್ಮದ ಮುಖವಾಡ ಧರಿಸಿ ಈ ಮೇಲಿನ ಮೂರೂ ವರ್ಗಗಳ ಬದುಕನ್ನೇ ಕಸಿದುಕೊಳ್ಳುತ್ತಿದೆ. ಬಕ್ರೀದ್ ಹಬ್ಬವು ದೇಶದಾದ್ಯಂತ ಇರುವ ರೈತಾಪಿ ಜನ ಮತ್ತು ಜಾನುವಾರು ವ್ಯಾಪಾರಿಗಳಿಗೆ ತಮ್ಮ ಆರ್ಥಿಕತೆಯನ್ನು ಸರಿದೂಗಿಸುವ ಅತ್ಯಂತ ಮಹತ್ವದ ಕೊಡುಗೆಯನ್ನು ನೀಡುತ್ತಿದೆ. ಆದ್ದರಿಂದಲೇ ಬಕ್ರೀದ್ ಕೋಟ್ಯಂತರ ರೈತ- ದಲ್ಲಾಳಿ-ವ್ಯಾಪಾರಿಗಳ ಮುಖದಲ್ಲಿ ಸಂತೋಷ ಸ್ಫುರಿಸುವ ದಿನಗಳಾಗಿವೆ. ಅದರೊಂದಿಗೆ ಮುಸ್ಲಿಮರ ಬಕ್ರೀದ್ ಹಬ್ಬದ ಸಂಭ್ರಮವೂ ಸೇರಿಕೊಂಡಾಗ ಹಬ್ಬದ ಸಂತಸ, ಸಡಗರವು ಜಾತಿ- ಧರ್ಮವನ್ನು ಮೀರಿ ದೇಶದ ಭ್ರಾತೃತ್ವದ ಮೂರ್ತರೂಪವಾಗಿ ಪರಿಣಮಿಸುತ್ತದೆ.
ಇದು ವರ್ಷಂಪ್ರತಿ ಬಕ್ರೀದ್ ಹಬ್ಬದ ವೇಳೆ ತಂಗಾಳಿಯಂತೆ ಮರುಕಳಿಸುತ್ತದೆ.
ಮುಸ್ಲಿಮರು ತಮ್ಮ ಮೂಲಭೂತ ಧಾರ್ಮಿಕ ಹಕ್ಕನ್ನು ಪ್ರಾಣಿಬಲಿ ಮೂಲಕ ತೀರಿಸುತ್ತಾರೆ. ಅದನ್ನು ಘನವೆತ್ತ ದೇಶದ ಸಂವಿಧಾನವು ಅನುಮೋದಿಸುತ್ತದೆ . ಇಲ್ಲಿ , ಯಾವುದೇ ಧರ್ಮದ ಭಾವನೆಗಳಿಗೆ ಕುಂದು ಉಂಟಾಗುವ ಪ್ರಮೇಯವೇ ಬರುವುದಿಲ್ಲ.

- Advertisement -


ಕೊನೆಯದಾಗಿ, ಗೋವನ್ನು ಪವಿತ್ರವೆಂದು ನಂಬುವ ವರ್ಗಕ್ಕೆ ಅದನ್ನು ಪೂಜಿಸುವ ಹಕ್ಕಿದೆ. ಅದೇ ರೀತಿ ರೈತನಿಗೆ ಅನುಪಯುಕ್ತ ಜಾನುವಾರುಗಳನ್ನು (ದನಗಳ ಸಹಿತ) ಮಾರಾಟ ಮಾಡುವ ಹಕ್ಕೂ ಇದೆ. ಒಂದು ಸರಕು ಎಂಬಂತೆ ದಲ್ಲಾಳಿಗಳಿಗೆ ಅದನ್ನು ಕೊಂಡು ಮಾರುವ ಹಕ್ಕಿದೆ. ಅದನ್ನು ಬೆಲೆ ಕೊಟ್ಟು ಕೊಳ್ಳುವಾತನಿಗೆ ಅದನ್ನು ಆಹಾರವಾಗಿ ತಿನ್ನುವ ಹಕ್ಕೂ ಇದೆ. ಈ ಎಲ್ಲಾ ಸಂದರ್ಭಗಳಲ್ಲಿ ಯಾವುದೇ ವರ್ಗಗಳ ಹಕ್ಕು, ಸ್ವಾತಂತ್ರ್ಯ, ನಂಬಿಕೆಗಳಿಗೆ ಎಲ್ಲೂ ಎಳ್ಳಷ್ಟು ಚ್ಯುತಿ ಬರುವುದಿಲ್ಲ. ಮಾತ್ರವಲ್ಲ ಎಲ್ಲಾ ವರ್ಗಗಳೂ ಸಂವಿಧಾನ ನೀಡಿದ ಹಕ್ಕನ್ನು ಚಲಾಯಿಸುವ ಸ್ವಾತಂತ್ರ್ಯವನ್ನು ಪಡೆಯುತ್ತವೆ.


ಆದ್ದರಿಂದ ಸಂಘಪರಿವಾರದ ಹಿಂಸಾತ್ಮಕ ಗೋ ರಾಜಕಾರಣವನ್ನು ಸೋಲಿಸಿ, ಸಾಂವಿಧಾನಿಕ ಹಕ್ಕನ್ನು ಚಲಾಯಿಸಲು ದೇಶದ ಎಲ್ಲಾ ಮತ-ಧರ್ಮೀಯರು, ಜಾತ್ಯತೀತರು, ಬುದ್ಧಿ ಜೀವಿಗಳು, ಸಂವಿಧಾನ ತಜ್ಞರು, ಧಾರ್ಮಿಕ ಕೇಂದ್ರಗಳು, ನ್ಯಾಯಾಲಯಗಳು ಧ್ವನಿ ಎತ್ತಬೇಕಾಗುತ್ತದೆ ಮತ್ತು ಸಂವಿಧಾನ ನೀಡಿದ ಸಕಲ ಹಕ್ಕುಗಳನ್ನು ಭಾರತೀಯರೆಲ್ಲರೂ ಅನುಭವಿಸುವ ಸ್ವಾತಂತ್ರ್ಯವನ್ನು ಖಾತರಿಪಡಿಸಬೇಕಾಗುತ್ತದೆ. ಆ ವೇಳೆ ಮಾತ್ರವೇ ಈ ದೇಶ ನಾಗರಿಕ ದೇಶವಾಗಿ ಉಳಿಯಬಹುದು.

Join Whatsapp