ಮುಸ್ಲಿಂ ಸಮುದಾಯದ ವಿರುದ್ಧ ಕಾಂಗ್ರೆಸ್ ಸರ್ಕಾರದ ತಾರತಮ್ಯ ನೀತಿಯನ್ನು ಪ್ರಶ್ನಿಸದ ಮುಸ್ಲಿಂ ಶಾಸಕರ ಕ್ಷೇತ್ರಗಳಲ್ಲಿ ಪ್ರತಿಭಟನೆ: ಅಬ್ದುಲ್ ಮಜೀದ್

Prasthutha|

ಬೆಂಗಳೂರು: ಕಾಂಗ್ರೆಸ್ ತನ್ನ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮುಸ್ಲಿಂ ಸಮುದಾಯಕ್ಕೆ ಸಾಕಷ್ಟು ಭರವಸೆಗಳನ್ನು ನೀಡಿತ್ತು. ಅದ್ಯಾವುದನ್ನೂ ಈಡೇರಿಸದೆ ಕೋಮುವಾದಿ ಬಿಜೆಪಿಯಂತೆಯೇ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ. ಈ ತಾರತಮ್ಯವನ್ನು ಪ್ರಶ್ನಿಸಬೇಕಾದ ಮುಸ್ಲಿಂ ಶಾಸಕರು ಮೌನ ವಹಿಸಿದ್ದಾರೆ. ಮುಸ್ಲಿಂ ಶಾಸಕರ ಮೌನವನ್ನು ಖಂಡಿಸಿ ಎಲ್ಲ ಮುಸ್ಲಿಂ ಶಾಸಕರ ಕ್ಷೇತ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

- Advertisement -

ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯನವರು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೊದಲ ಸಂಪುಟದಲ್ಲೇ 2B ಮೀಸಲಾತಿಯನ್ನು ಮರುಸ್ಥಾಪನೆ ಮಾಡುತ್ತೇವೆ ಎಂದು ಮುಸ್ಲಿಂ ಸಮುದಾಯಕ್ಕೆ ವಾಗ್ದಾನ ನೀಡಿದ್ದರು. ಅದರ ಜೊತೆಗೆ ದ್ವೇಷ ಭಾಷಣಗಳ ಮೇಲೆ ಕಡಿವಾಣ, ಗೋವಿನ ಹೆಸರಿನಲ್ಲಿ ನಡೆಯುವ ಹಲ್ಲೆಗಳ ವಿರುದ್ಧ ಕಠಿಣ ಕ್ರಮ, ಜೈಲಿನಲ್ಲಿರುವ ಅಮಾಯಕ ಮುಸ್ಲಿಂ ಯುವಕರ ಬಿಡುಗಡೆ, ಮುಸ್ಲಿಮರ ವ್ಯಾಪಾರ ನಿಷೇಧದ ವಿರುದ್ಧ ಕ್ರಮ, ಹಿಜಾಬ್ ನಿಷೇಧ ವಾಪಸ್, ನೈತಿಕ ಪೋಲಿಸ್ ಗಿರಿ ಪ್ರಕರಣಗಳ ವಿರುದ್ಧ ಕ್ರಮ ಮುಂತಾದವಾಗಿ ಸಾಕಷ್ಟು ಭರವಸೆಗಳನ್ನು ನೀಡಿದ್ದರು. ಅದನ್ನು ನಂಬಿದ ಮುಸ್ಲಿಂ ಸಮುದಾಯ ಒಟ್ಟು ಮೊತ್ತವಾಗಿ 98% ಅಂದರೆ ಸರಿ ಸುಮಾರು 50 ಲಕ್ಷ ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿತು. ಆ ಮೂಲಕ ಪ್ರಚಂಡ ಬಹುಮಾತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಗದ್ದುಗೆ ಏರಿದ ಮೇಲೆ ಈ ಭರವಸೆಗಳಲ್ಲಿ ಒಂದೇ ಒಂದು ಭರವಸೆಯನ್ನು ಸಹ ಈಡೇರಿಸಿಲ್ಲ. ಇದು ಕಾಂಗ್ರೆಸ್ ಪಕ್ಷದ ಮಹಾ ದ್ರೋಹ ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.

ಭರವಸೆಗಳನ್ನು ಈಡೇರಿಸದ್ದು ಒಂದೆಡೆಯಾದರೆ, ಇನ್ನೊಂದೆಡೆ ಕಾಂಗ್ರೆಸ್ ಪಕ್ಷ ತಾರತಮ್ಯ ನೀತಿಯಲ್ಲಿ ತಾನು ಬಿಜೆಪಿಗಿಂತ ಏನೇನೂ ಕಡಿಮೆ ಇಲ್ಲ ಎಂದು ಸಾಬೀತುಪಡಿಸುತ್ತಿದೆ. ಪ್ಯಾಲೆಸ್ತೀನಿಯರ ಪರ ಸಣ್ಣ ಪ್ರತಿಭಟನೆಗೆ ಮುಂದಾದರೆ ನಿಷೇಧ ಹೇರುವ ಮತ್ತು ಕೇಸು ಮಾಡುವಂತಹ ಕಾರ್ಯವನ್ನು ಕಾಂಗ್ರೆಸ್ ಮಾಡಿದೆ. ಆದರೆ ಸಂಘಪರಿವಾರದ ಗೂಂಡಾಗಳು ಮುಸ್ಲಿಮರ ಕೊಲೆಗೆ ಪ್ರಚೋದನೆ ನೀಡಿದರೂ, ಸಮುದಾಯವನ್ನು ಅವಮಾನಿಸಿದರೂ, ಯಾವುದೇ ಸಮಸ್ಯೆ ಒಡ್ಡಿದರೂ ಅವರ ವಿರುದ್ಧ ಕಾಂಗ್ರೆಸ್ ಯಾವುದೇ ಕ್ರಮ ಕೈಗೊಳ್ಳದೆ ತಾರತಮ್ಯ ನೀತಿ ಅನುಸರಿಸುತ್ತಿದೆ. ಅದಕ್ಕೆ ತಾಜಾ ಉದಾಹರಣೆ ಕಲ್ಲಡ್ಕ ಪ್ರಭಾಕರ ಭಟ್ಟನ ಪ್ರಕರಣ ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಇನ್ನು ಕಾಂಗ್ರೆಸ್ ಸರ್ಕಾರ ಇಷ್ಟೆಲ್ಲ ಮಾತಿಗೆ ತಪ್ಪಿದ್ದರೂ, ತಾರತಮ್ಯ ನೀತಿ ಅನುಸರಿಸುತ್ತಿದ್ದರೂ ಮುಸ್ಲಿಂ ಶಾಸಕರಲ್ಲಿ ಒಬ್ಬರೂ ಸಹ ಇದರ ವಿರುದ್ಧ ಧ್ವನಿ ಎತ್ತದೆ ಮೌನವಹಿಸಿದ್ದಾರೆ. ಅವರಿಗೆ ಸಮುದಾಯದ ಹಿತಕ್ಕಿಂತ ತಮ್ಮ ರಾಜಕೀಯ ಭವಿಷ್ಯ ಮುಖ್ಯವಾಗಿದೆ. ಇದು ನಾಚಿಕೆಗೇಡಿನ ಸಂಗತಿ ಎಂದು ಮಜೀದ್ ಅವರು ಪ್ರಕಟಣೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಸ್ಲಿಂ ಶಾಸಕರ ಈ ಮೌನವನ್ನು ಪ್ರಶ್ನಿಸಿ, ಮುಸ್ಲಿಂ ಶಾಸಕರ ಕ್ಷೇತ್ರಗಳಲ್ಲಿ ಪ್ರತಿಭಟನೆಯನ್ನು ಎಸ್‌ಡಿಪಿಐ ಪಕ್ಷ ಹಮ್ಮಿಕೊಂಡಿದೆ. ಕಾಂಗ್ರೆಸ್ ಪಕ್ಷ ಮತ್ತು ಮುಸ್ಲಿಂ ಶಾಸಕರು ಇನ್ನಾದರೂ ಎಚ್ಚೆತ್ತುಕೊಂಡು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಅವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಮಜೀದ್ ಅವರು ಎಚ್ಚರಿಕೆ ನೀಡಿದ್ದಾರೆ.



Join Whatsapp