ಸಮಾನತೆಯ ಸಮಾಜ ನಿರ್ಮಾಣ ಸರಕಾರದ ಗುರಿ: ಸಿಎಂ ಬಸವರಾಜ ಬೊಮ್ಮಾಯಿ

Prasthutha|

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ದತ್ತ ಪಿಠಕ್ಕೆ ರೋಪ್ ವೇ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

- Advertisement -

ಬುಧವಾರ ಜಿಲ್ಲೆಯ ವಿವಿಧ ಯೋಜನೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಹಾಗೂ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು.

“ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ.  ರೋಪ್ ವೇ ಗಳನ್ನು ಪ್ರಥಮ ಬಾರಿಗೆ ರಾಜ್ಯದಲ್ಲಿ ಪ್ರವಾಸೀ ತಾಣಗಳಿಗೆ ಪರಿಚಯಿಸಲು ತೀರ್ಮಾನಿಸಲಾಗಿದೆ. ಚಾಮುಂಡಿಬೆಟ್ಟ, ನಂದಿ ಬೆಟ್ಟ, ಅಂಜನಾದ್ರಿ ಬೆಟ್ಟದಲ್ಲಿ ನಿರ್ಮಿಸಲಾಗುತ್ತಿದೆ” ಎಂದರು.

- Advertisement -

“ಇಲ್ಲಿಗೆ ವಿಮಾನ ಸೌಲಭ್ಯ ಅಗತ್ಯವಿದೆ. ಅದಕ್ಕಾಗಿ ಏರ್ ಸ್ಟ್ರಿಪ್  ನಿರ್ಮಿಸಿ ಪ್ರವಾಸೋದ್ಯಕ್ಕೆ ಇಂಬು ಕೊಡಲು ಪ್ರಯತ್ನಿಸಲಾಗುವುದು. ಮೂರು ಕಡೆಗಳಲ್ಲಿ ಹೆಲಿಪೋರ್ಟ್ ನಿರ್ಮಿಸಲಾಗುತ್ತಿದೆ. ಹಂಪಿ, ಚಿಕ್ಕಮಗಳೂರು ಮತ್ತು ಮಡಿಕೇರಿಗಳಲ್ಲಿ ನಿರ್ಮಿಸಲಾಗುತ್ತಿದೆ. ಚಿಕ್ಕಮಗಳೂರಿನಲ್ಲಿ ಹೆಲಿಪೋರ್ಟ್ ನ್ನು ಇದೇ ವರ್ಷ ಪ್ರಾರಂಭ ಮಾಡಲಾಗುವುದು. ಗ್ರಾಮಿಣ ಪ್ರದೇಶದಲ್ಲಿ ಸಂಚಾರಿ ಆಸ್ಪತ್ರೆಯನ್ನು ನಾಲ್ಕು ಜಿಲ್ಲೆಗಳಲ್ಲಿ ಪ್ರಾರಂಭಿಸಿದ್ದು,  ಈ ಪೈಕಿ ಚಿಕ್ಕಮಗಳೂರು ಜಿಲ್ಲೆಯೂ ಒಂದು” ಎಂದು ಬೊಮ್ಮಾಯಿ ತಿಳಿಸಿದರು.

ಸಮಾನತೆಯ ಸಮಾಜ ನಿರ್ಮಾಣವಾಗಬೇಕು

ಸಮಾನತೆಯ ಸಮಾಜ ನಿರ್ಮಾಣವಾಗಬೇಕು. ಸಾಮಾಜಿಕ ನ್ಯಾಯ ಭಾಷಣದ ಸರಕಾಗಿದೆ. ಇಷ್ಟು ವರ್ಷ ಮಾತನಾಡಿದ್ದು ಆಗಿದೆ. ಸಮಾನತೆಗೆ ಬೇಕಾಗಿರುವ ಕಾರ್ಯಕ್ರಮವನ್ನು ರೂಪಿಸಿ ಜನರಿಗೆ ಮುಟ್ಟಿಸುವ ಕೆಲಸವಾಗಬೇಕಿದೆ.  ಆದ್ದರಿಂದ ಇಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರನ್ನು ಮುಖ್ಯವಾಹಿನಿಗೆ ತಂದು ಅವರೂ ಸ್ವಾವಲಂಬನೆಯ ಸ್ವಾಭಿಮಾನಿ ಬದುಕು ಬದಕಬೇಕೆನ್ನುವುದು ನಮ್ಮ ಗುರಿ. ಅದಕ್ಕಾಗಿ ಶಿಕ್ಷಣ, ಆರೋಗ್ಯಕ್ಕೆ ಅತಿ ಹೆಚ್ಚು ಒತ್ತು ನೀಡಲಾಗಿದೆ. 100 ಅಂಬೇಡ್ಕರ್  ವಿದ್ಯಾರ್ಥಿನಿಲಯ ಹಾಗೂ 50 ಹಿಂದುಳಿದ ವರ್ಗಗಳ ಹಾಸ್ಟಲ್‍ಗಳನ್ನು ಕನಕದಾಸರ ಹೆಸರಿನಲ್ಲಿ ಪ್ರಾರಂಭಿಸಲಾಗುತ್ತಿದೆ. ದೊಡ್ಡ ನಗರಗಳಲ್ಲಿ 1000 ವಿದ್ಯಾರ್ಥಿಗಳ ಕ್ಲಸ್ಟರ್ನ್ನು ನಿರ್ಮಿಸಲಾಗುತ್ತಿದೆ.  ಮುಂಬರುವ ದಿನಗಳಲ್ಲಿ ದೊಡ್ಡ ಪ್ರಮಾಣದ ಬದಲಾವಣೆಯನ್ನು ತರಲಾಗುವುದು. ಎಸ್.ಸಿ/ಎಸ್.ಟಿ  ವರ್ಗದವರಿಗೆ 75 ಯೂನಿಟ್ ಉಚಿತ ವಿದ್ಯುತ್ ನೀಡುವ ಘೋಷಣೆ ಮಾಡಲಾಗಿದೆ.  ಇದುವರೆಗೂ ಯಾವ ಸರ್ಕಾರವೂ ಈ ಕೆಲಸವನ್ನು ಮಾಡಿಲ್ಲ. ಅವರಿಗೆ 2 ಲಕ್ಷ ರೂ.ಗಳನ್ನು  ಗೃಹ ನಿರ್ಮಾಣಕ್ಕೆ ನೀಡಲಾಗಿದೆ.  3000 ಕಿಮಿ ರಸ್ತೆ, ರೈಲು, ಹಾಸನ – ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಲಾಗುವುದು. ಅಭಿವೃದ್ಧಿಯ ಪಥ ನಿರಂತರವಾಗಿ ಸಾಗಲು ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತದೆ ಬಸವರಾಜ ಬೊಮ್ಮಾಯಿ ಹೇಳಿದರು.



Join Whatsapp