ಬೆಂಗಳೂರು: ಗೃಹಲಕ್ಷ್ಮೀ ಯೋಜನೆ ಜಾರಿಗೆ ಪ್ರಜಾಪ್ರತಿನಿಧಿ ನೇಮಕಕ್ಕೆ ಸರ್ಕಾರ ನಿರ್ಧಾರ ಮಾಡಿದ್ದು, ಈ ಕುರಿತಾಗಿ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ.
ಪ್ರಜಾಪ್ರತಿನಿಧಿಗಳಿಗೆ ಗೌರವಧನ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಓರ್ವ ಮಹಿಳೆ ಸೇರಿದಂತೆ ಪ್ರತಿ 1 ಸಾವಿರ ಜನರಿಗೆ ಅಥವಾ 1 ಗ್ರಾಮಕ್ಕೆ ಇಬ್ಬರು ಪ್ರಜಾಪ್ರತಿನಿಧಿ ನೇಮಕ ಮಾಡಲಾಗುತ್ತಿದೆ. ಒಂದು ತಿಂಗಳ ಅವಧಿಗೆ ಮಾತ್ರ ಪ್ರಜಾಪ್ರತಿನಿಧಿ ನೇಮಕಕ್ಕೆ ಸರ್ಕಾರ ಮುಂದಾಗಿದೆ.
ಗೃಹಲಕ್ಷ್ಮಿ ಯೋಜನೆಯ ಅರ್ಜಿದಾರರು ಗ್ರಾಮ್ ಒನ್, ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್‌ಗಳಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಈಗಾಗಲೇ ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಕೇಂದ್ರಗಳಲ್ಲಿ ಉಂಟಾಗಬಹುದಾಗ ಒತ್ತಡವನ್ನು ತಪ್ಪಿಸುವ ಸಲುವಾಗಿ ಮೊಬೈಲ್ ಆ್ಯಪ್ ಮೂಲಕವು ಸಹ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಲು ಪ್ರಜಾ ಪ್ರತಿನಿಧಿಗಳನ್ನು ನೇಮಕ ಮಾಡುವುದಾಗಿ ಈ ಹಿಂದೆ ತಿಳಿಸಲಾಗಿತ್ತು. ಅದರಂತೆಯೇ ಇಂದು ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ.
ಪ್ರಜಾ ಪ್ರತಿನಿಧಿಗಳ ಆಯ್ಕೆ ಹೇಗೆ?
ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಪ್ರಜಾ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. 1000 ಜನಸಂಖ್ಯೆಗಿಂತ ಕಡಿಮೆ ಅಥವಾ ಅದಕ್ಕೆ ಸಮನಾದ ಪ್ರತಿ ಗ್ರಾಮಕ್ಕೆ 2 ಪುಜಾ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಪ್ರತಿ ಹೆಚ್ಚುವರಿ 500 ಜನ ಸಂಖ್ಯೆಗೆ, ಒಂದು ಹೆಚ್ಚುವರಿ ಪ್ರಜಾ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತಿದೆ.
ನಗರ ಪುದೇಶದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪ್ರತಿ ವಾರ್ಡ್ನಲ್ಲಿ 1000 ಜನಸಂಖ್ಯೆಗೆ ಇಬ್ಬರು ಪುಜಾ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಪ್ರತಿ ಹೆಚ್ಚುವರಿ 500 ಜನ ಸಂಖ್ಯೆಗ ಒಂದು ಹೆಚ್ಚುವರಿ ಪ್ರಜಾ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಪ್ರಜಾ ಪ್ರತಿನಿಧಿಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯಿಂದ ಡಿಜಿಟೈಸ್ ಮಾಡಲಾಗುತ್ತದೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ರಿಂದ ನಾಳೆ ಸುದ್ದಿಗೋಷ್ಠಿ
ಗೃಹಲಕ್ಷ್ಮೀ ಯೋಜನೆ ಜಾರಿ ವಿಚಾರವಾಗಿ ನಾಳೆ ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸುದ್ದಿಗೋಷ್ಠಿ ಮಾಡಲಿದ್ದು, ಗೃಹಲಕ್ಷ್ಮೀ ಯೋಜನೆ ಜಾರಿ ಬಗ್ಗೆ ವಿವರಣೆ ನೀಡಲಿದ್ದಾರೆ.