ಕೋಮು ಉದ್ವಿಗ್ನತೆಯ ಕಾರಣ ನೀಡಿ ನುಹ್’ನಲ್ಲಿ ಮೊಬೈಲ್ ಇಂಟರ್ನೆಟ್ ಸ್ಥಗಿತಗೊಳಿಸಿದ ಸರ್ಕಾರ

Prasthutha|

ಜೈಪುರ: ರಾಜಸ್ತಾನದಿಂದ ಇಬ್ಬರು ಮುಸ್ಲಿಂ ಯುವಕರನ್ನು ಗೋರಕ್ಷಕ ಹೆಸರಿನ ದುಷ್ಕರ್ಮಿಗಳ ತಂಡ ಅಪಹರಿಸಿಕೊಂಡು ಬಂದು ಹರಿಯಾಣದಲ್ಲಿ ಸುಟ್ಟು ಕೊಂದುದರ ವಿರುದ್ಧ ತೀವ್ರ ಪ್ರತಿಭಟನೆ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ, ಕೋಮು ಉದ್ವಿಗ್ನತೆ ಉಂಟಾಗಬಹುದು ಎಂದು ಕಾರಣ ನೀಡಿ ಹರಿಯಾಣ ಸರಕಾರವು ನುಹ್ ಜಿಲ್ಲೆಯಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಎಸ್ ಎಂಎಸ್ ಸೇವೆಯನ್ನು ಸ್ಥಗಿತಗೊಳಿಸಿದೆ.
ಫೆಬ್ರವರಿ 26ರಿಂದ ಆರಂಭವಾಗಿ ಇದು ಫೆಬ್ರವರಿ 28ರವರೆಗೆ ಈ ನಿಲುಗಡೆ ಇರುತ್ತದೆ ಎಂದು ಸರಕಾರದ ಸುತ್ತೋಲೆ ತಿಳಿಸಿದೆ.

- Advertisement -


ನೂರಾರು ಜನರು ಫಿರೋಜ್’ಪುರ ಜಿರ್ಕಾದ ನುಹ್ – ಆಲ್ವಾರ್ ರಸ್ತೆಯನ್ನು ಬಂದ್ ಮಾಡಿದ್ದರಿಂದ ಆ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹರಿಯಾಣದ ಗೋರಕ್ಷಕರು ರಾಜಸ್ತಾನದಿಂದ ಅಪಹರಿಸಿ ತಂದ ಇಬ್ಬರು ಮುಸ್ಲಿಂ ಯುವಕರ ಸುಟ್ಟು ಕೊಲೆಯಾದ ಶವಗಳು ಹರಿಯಾಣದ ಭಿವಾನಿ ಜಿಲ್ಲೆಯಲ್ಲಿ ಪತ್ತೆಯಾಗಿದ್ದವು. ಆ ಬಗ್ಗೆ ನ್ಯಾಯ ಕೋರಿ ಪ್ರತಿಭಟನೆಗಳು ನಡೆಯುತ್ತಿವೆ.
ಬೇರೆ ಬೇರೆ ಅಂತರ್ಜಾಲ ವೇದಿಕೆಗಳಾದ ವಾಟ್ಸ್ ಆ್ಯಪ್, ಫೇಸ್ ಬುಕ್, ಟ್ವಿಟರ್, ಮೊಬೈಲ್ ಫೋನು, ಎಸ್ ಎಂಎಸ್, ಮೊದಲಾದವುಗಳ ಮೂಲಕ ತಪ್ಪು ಸುದ್ದಿಗಳ ಹರಡಬಾರದು ಎನ್ನುವುದಕ್ಕಾಗಿ ಈ ನಿಷೇಧ ಹೇರಲಾಗಿದೆ ಎಂದು ಸರಕಾರದ ಸುತ್ತೋಲೆಯಲ್ಲಿ ಹೇಳಲಾಗಿದೆ.


ಮುಖ್ಯವಾಗಿ ಕೋಮು ಗಲಭೆ ತಪ್ಪಿಸಿ, ಶಾಂತಿ ನೆಲೆಸುವಂತೆ ಮಾಡುವುದು ಇದರ ಉದ್ದೇಶ ಎಂದು ಹೇಳಲಾಗಿದೆ.
ಬುಧವಾರ ಇಬ್ಬರ ಕೊಲೆ ಸಂಬಂಧ ಬಂಧಿಸಿದ್ದ ರಿಂಕು ಸೈನಿ ಎಂಬಾತನನ್ನು ಕೋರ್ಟಿಗೆ ಹಾಜರಗುಪಡಿಸಲಾಗಿದ್ದು, ಆತನನ್ನು ಫೆಬ್ರವರಿ 27ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು.
ರಾಜಸ್ತಾನದ ಭರತ್ ಪುರ ಜಿಲ್ಲೆಯ ಘಟ್ಮೀಕ ಗ್ರಾಮದವರಾದ ನಾಸಿರ್ ಮತ್ತು ಜುನೈದ್ ಅವರನ್ನು ಫೆಬ್ರವರಿ 15ರಂದು ಕಾನೂನು ಬಾಹಿರವಾಗಿ ಗೋರಕ್ಷಕರು ಎನ್ನುವವರು ಅಪಹರಿಸಿದ್ದರು. ಮರು ದಿನ ಕಾರಿನಲ್ಲೇ ಸುಟ್ಟು ಕರಕಲಾದ ಅವರ ದೇಹವು ಹರಿಯಾಣದ ಭಿವಾನಿ ಜಿಲ್ಲೆಯ ಲೊಹ್ರು ಎಂಬಲ್ಲಿ ಪತ್ತೆಯಾಗಿತ್ತು.

- Advertisement -


ಎಫ್’ಐಆರ್’ನಲ್ಲಿ ಹೆಸರಿಸಿರುವ ಎಂಟು ಮಂದಿ ಆರೋಪಿಗಳ ಬಗ್ಗೆ ನಮ್ಮ ಬಳಿ ಸಾಕ್ಷ್ಯಗಳು ಇರುವುದಾಗಿ ರಾಜಸ್ತಾನ ಪೊಲೀಸರು ತಿಳಿಸಿದ್ದಾರೆ. ಆ ಎಂಟು ಜನರೆಂದರೆ ನುಹ್’ನ ಅನಿಲ್ ಮತ್ತು ಶ್ರೀಕಾಂತ್, ಕೈತಾಲ್’ನ ಕಾಳು, ಕರ್ನಾಲಿನ ಕಿಶೋರ್ ಮತ್ತು ಶಶಿಕಾಂತ್, ಭಿವಾನಿಯ ಮೋನು ಮತ್ತು ಗೋಗಿ, ಜಿಂದ್’ನ ವಿಕಾಸ್ ಆರೋಪಿಗಳು ಎಂದು ಪೊಲೀಸ್ ಮೂಲಗಳು ಹೇಳಿವೆ.
ಈ ಜೋಡಿ ಕೊಲೆಯಲ್ಲಿ ಬಜರಂಗ ದಳದ ನಾಯಕ ಮೋನು ಮನೇಸರ್ ಎಂಬ ವ್ಯಕ್ತಿಯ ಪಾತ್ರದ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.



Join Whatsapp