ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರ ದುಪ್ಪಟ್ಟು ಬೆಳೆ ಪರಿಹಾರ ನೀಡಿತ್ತು. ಅದೇ ರೀತಿ ಕಾಂಗ್ರೆಸ್ ಸರ್ಕಾರ ಈಗಲೂ ಡಬಲ್ ಪರಿಹಾರ ನೀಡಿ, ನಿಜವಾದ ಕಾಳಜಿ ತೋರಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಸರಕಾರವನ್ನು ಆಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಬರಗಾಲದಿಂದ ಬಸವಳಿದ ಅನ್ನದಾತರ ನೆರವಿಗೆ ತುರ್ತು ಧಾವಿಸಿಬೇಕಾದ ರಾಜ್ಯ ಕಾಂಗ್ರೆಸ್ ಸರ್ಕಾರ ‘ಕೈ’ಕೊಟ್ಟಿತು. ಆದರೆ 3,454 ಕೋಟಿ ರೂ. ಬರ ಪರಿಹಾರ ಘೋಷಿಸಿದ ಕೇಂದ್ರ ಸರ್ಕಾರ ನೈಜವಾಗಿ ಸ್ಪಂದಿಸಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರವೇ ಮುಂದಾಗಿ ಬರ ಪರಿಹಾರ ಬಿಡುಗಡೆ ಮಾಡಿದೆ. ಇದರಲ್ಲಿ ರಾಜ್ಯ ಸರ್ಕಾರದ ಶ್ರಮವೇನಿಲ್ಲ. ಸಿದ್ದರಾಮಯ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ ಎನ್ನುವುದು ಜಗಜ್ಜಾಹೀರಾಗಿದೆ ಎಂದು ಆರ್. ಅಶೋಕ್ ಟೀಕಿಸಿದರು.
ಕಾಂಗ್ರೆಸ್ ಸರ್ಕಾರ ತನ್ನ ಕೈಚಳಕ ತೋರಿಸಿ ಬರ ಪರಿಹಾರವನ್ನು ಲೂಟಿ ಮಾಡಬಾರದು. ನೇರ ರೈತರ ಬ್ಯಾಂಕ್ ಖಾತೆಗೆ ಜಮಾ ಆಗುವುದರ ಬಗ್ಗೆ ನಾವು ಕಾವಲು ಕಾಯುತ್ತೇವೆ. ನೇರ ನಗದು ವರ್ಗಾವಣೆಯೇ ಪಾರದರ್ಶಕತೆ ಕಾಯ್ದುಕೊಳ್ಳಲು ಸೂಕ್ತವಾಗಿದೆ ಎಂದರು.