ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಬಿ. ಎಮ್ ಫಾರೂಕ್ ಸಹೋದರ ಉದ್ಯಮಿ ಮುಮ್ತಾಝ್ ಅಲಿ ಅವರು ಹನಿಟ್ರ್ಯಾಪ್ ಗುಂಪಿನ ಕ್ರೌರ್ಯಕ್ಕೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಹನಿಟ್ರ್ಯಾಪ್ ಒಂದು ವ್ಯವಸ್ಥಿತ ವಂಚನಾ ಜಾಲವಾಗಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವ್ಯಾಪಾರಸ್ಥರು, ಉದ್ಯಮಿಗಳು ಅಪರಿಚಿತ ವ್ಯಕ್ತಿಗಳೊಂದಿಗೆ, ವ್ಯವರಿಸುವಾಗ ಎಚ್ಚರಿಕೆಯಿಂದ ಇರಬೇಕು ಮತ್ತು ಇಂತಹ ವಂಚನಾ ಜಾಲಕ್ಕೆ ಬಲಿಯಾಗದಿರಿ ಎಂದು ಅಬ್ದುಲ್ ಮಜೀದ್ ಕರೆ ನೀಡಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ದೊಡ್ಡಮಟ್ಟದಲ್ಲಿ ಸೋತಿದೆ. ಅದರಲ್ಲಿ ಮುಖ್ಯವಾದುದೆಂದರೆ ಹನಿಟ್ರ್ಯಾಪ್ ಪ್ರಕರಣಗಳು. ಇವುಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಉದ್ಯಮಿಗಳು ಈ ಪಿಡುಗಿನಿಂದ ನಲುಗಿ ಹೋಗಿದ್ದಾರೆ. ಅದಕ್ಕೆ ತಾಜಾ ಉದಾಹರಣೆ ಮುಮ್ತಾಝ್ ಅಲಿ ಅವರ ಪ್ರಕರಣ. ಮೊನ್ನೆ ನಾಪತ್ತೆಯಾಗಿದ್ದ ಅವರು ಸೋಮವಾರ ನದಿಯಲ್ಲಿ ಶವವಾಗಿ ದೊರೆತಿದ್ದಾರೆ. ಇಂತಹ ಪ್ರಕರಣಗಳಿಂದ ರಾಜ್ಯದಲ್ಲಿ ಗುಪ್ತಚರ ಇಲಾಖೆ ಸಂಪೂರ್ಣ ನಿದ್ದೆಯಲ್ಲಿದೆ ಎಂದು ಸ್ಪಷ್ಟವಾಗುತ್ತದೆ ಎಂದು ಮಜೀದ್ ಅವರು ರಾಜ್ಯ ಸರ್ಕಾರದ ವಿರುದ್ಧ ತಮ್ಮ ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.
ಈ ಪ್ರಕರಣದಲ್ಲಿ 6 ಮಂದಿ ಭಾಗಿಯಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ಆಳಕ್ಕೆ ಹೋಗಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.