ಗೋವುಗಳಿಗೆ ಮೂಲಭೂತ ಹಕ್ಕು ನೀಡಬೇಕು, ಅವುಗಳನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು: ಅಲಹಾಬಾದ್ ಹೈಕೋರ್ಟ್

Prasthutha|

ಲಕ್ನೋ: ಗೋವುಗಳಿಗೆ ಮೂಲಭೂತ ಹಕ್ಕುಗಳನ್ನು ನೀಡಬೇಕು ಹಾಗೂ ಅವುಗಳನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.


ಉತ್ತರ ಪ್ರದೇಶದಲ್ಲಿ ಗೋಹತ್ಯೆ ತಡೆ ಕಾಯಿದೆಯಡಿ ಬಂಧಿತನಾಗಿರುವ ಜಾವೇದ್‌ ಎಂಬಾತನಿಗೆ ಜಾಮೀನು ನಿರಾಕರಿಸುತ್ತಾ ಅಲಹಾಬಾದ್ ಹೈಕೋರ್ಟ್, ಗೋವು ಭಾರತದ ಸಂಸ್ಕೃತಿಯ ಭಾಗವಾಗಿದೆ. ಇದನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದು ಸೂಚಿಸಿದೆ.

- Advertisement -


ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರ ನೇತೃತ್ವದ ಏಕ ಸದಸ್ಯ ಪೀಠ, ಹಸುವಿಗೆ ಮೂಲಭೂತ ಹಕ್ಕುಗಳನ್ನು ನೀಡಲು ಮತ್ತು ಹಸುವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಲು ಸರ್ಕಾರವು ಸಂಸತ್ತಿನಲ್ಲಿ ಮಸೂದೆಯನ್ನು ತರಬೇಕು. ಹಸುವಿಗೆ ಹಾನಿ ಮಾಡುವ ಬಗ್ಗೆ ಮಾತನಾಡುವವರನ್ನು ಶಿಕ್ಷಿಸಲು ಕಠಿಣ ಕಾನೂನುಗಳನ್ನು ತರಬೇಕು ಎಂದು ಸೂಚಿಸಿತು.
“ಗೋಸಂರಕ್ಷಣೆಯ ಕೆಲಸ ಕೇವಲ ಒಂದು ಧರ್ಮ ಅಥವಾ ಪಂಗಡದವರ ಕೆಲಸವಲ್ಲ. ಗೋವು ಭಾರತದ ಸಂಸ್ಕೃತಿ. ಈ ಸಂಸ್ಕೃತಿಯನ್ನು ಉಳಿಸುವ ಕೆಲಸವು ಧರ್ಮದ ಹೊರತಾಗಿ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ ಎಂದು ನ್ಯಾಯಮೂರ್ತಿ ಹೇಳಿದರು.


ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ ಮತ್ತು ಗೋವಿಗೆ ಹಾನಿ ಮಾಡುವ ಬಗ್ಗೆ ಮಾತನಾಡುವವರ ವಿರುದ್ಧ ಕಠಿಣ ಕಾನೂನುಗಳನ್ನು ರಚಿಸಿ ಎಂದು ನ್ಯಾಯಾಧೀಶರು ಇದೇ ವೇಳೆ ಸರ್ಕಾರಕ್ಕೆ ಸೂಚಿಸಿದರು.
ಗೋಹತ್ಯೆ ತಡೆ ಕಾಯಿದೆಯ ಸೆಕ್ಷನ್ 3, 5 ಮತ್ತು 8 ರ ಅಡಿಯಲ್ಲಿ ಜಾವೇದ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಜಾವೇದ್ ಜಾಮೀನಿಗಾಗಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.


ಅರ್ಜಿದಾರರಿಗೆ ಜಾಮೀನು ನಿರಾಕರಿಸಿದ ಪೀಠ, ಇಡೀ ಜಗತ್ತಿನಲ್ಲಿ ವಿವಿಧ ಧರ್ಮಗಳ ಜನರು ವಾಸಿಸುವ ಏಕೈಕ ದೇಶ ಇದ್ದರೆ ಅದು ಭಾರತ ಮಾತ್ರ. ಇಲ್ಲಿ ವಿಭಿನ್ನ ರೀತಿಯ ಪೂಜೆಗಳು ಇದ್ದರೂ ದೇಶದಲ್ಲಿ ಎಲ್ಲರ ಆಲೋಚನೆ ಒಂದೇ ಆಗಿದೆ ಎಂದು ಹೇಳಿತು.
“ಇಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಬ್ಬರೂ ಭಾರತವನ್ನು ಒಗ್ಗೂಡಿಸಲು ಮತ್ತು ಅದರ ನಂಬಿಕೆಯನ್ನು ಬೆಂಬಲಿಸಲು ಒಟ್ಟಾಗಿ ಹೆಜ್ಜೆ ಇಡಬೇಕು. ಇದೇ ವೇಳೆ ಕೆಲವು ಜನರು ದೇಶವನ್ನು ದುರ್ಬಲಗೊಳಿಸುತ್ತಾರೆ ಎಂದು ಹೇಳಿತು.
ಅರ್ಜಿದಾರರ ವಿರುದ್ಧ ಮೇಲ್ನೋಟಕ್ಕೆ ಅಪರಾಧವು ಸಾಬೀತಾಗಿದೆ. ಜಾಮೀನು ನೀಡಿದರೆ, ಅದು ಸಾಮರಸ್ಯಕ್ಕೆ ಭಂಗ ತರುತ್ತದೆ ಎಂದು ಹೇಳಿ ಜಾಮೀನು ಅರ್ಜಿಯನ್ನು ತಳ್ಳಿ ಹಾಕಿತು.

- Advertisement -