ಚಿಕ್ಕಮಗಳೂರು: ರಾಜ್ಯದ ವಾಣಿಜ್ಯ ಬೆಳೆಯಾದ ಅಡಿಕೆ ಎಲೆಚುಕ್ಕೆ ರೋಗದ ನಿವಾರಣೆ ಹಾಗೂ ಹರಡದಂತೆ ಕ್ರಮ ವಹಿಸಲು ಸರ್ಕಾರ ಸಂಪೂರ್ಣ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಚಿಕ್ಕಮಗಳೂರಿನಲ್ಲಿ ಕಡೂರಿನ ಪೊಲೀಸ್ ತರಬೇತಿ ಕೇಂದ್ರ ಹೆಲಿಪ್ಯಾಡ್’ಗೆ ಬಂದಿಳಿದು ಮಾಧ್ಯಮದವರೊಂದಿಗೆ ಮಾತನಾಡಿದರು.
ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕೆ ರೋಗ ಕಾಣಿಸಿಕೊಂಡಿದ್ದು, ಈಗಾಗಲೇ ವಿಶ್ವವಿದ್ಯಾಲಯಗಳು, ಸಂಬಂಧಪಟ್ಟ ಇಲಾಖೆ, ಕೇಂದ್ರ ಸರ್ಕಾರದ ಸಂಸ್ಥೆಗಳು ಎಲೆಚುಕ್ಕೆ ರೋಗ ಪರಿಹರಿಸಲು ಕಾರ್ಯೋನ್ಮುಖವಾಗಿವೆ. ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಔಷಧಿ ಸಿಂಪಡನೆಗೆ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಎಲೆಚುಕ್ಕೆ ರೋಗದ ಮೂಲಕಾರಣ ಹಾಗೂ ಔಷಧಿಯ ಬಗ್ಗೆ ವಿಜ್ಞಾನಿಗಳು ಅಧ್ಯಯಿಸಿ ,ಚಿಕಿತ್ಸಾ ಮಾರ್ಗ ಕಂಡುಹಿಡಿದರೆ, ಅದರಂತೆ ಸರ್ಕಾರ ಕ್ರಮಕೈಗೊಳ್ಳುವುದು. ಈ ರೋಗ ದೊಡ್ಡ ಪ್ರಮಾಣದಲ್ಲಿ ಹರುಡುತ್ತಿರುವುದರಿಂದ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದೆ ಎಂದರು.
ಸರ್ಕಾರ ಒಂದೂವರೆ ತಿಂಗಳೊಳಗೆ ಬೆಳೆ ಪರಿಹಾರ ನೀಡಿದೆ:
ಬರುವ ದಿನಗಳಲ್ಲಿ ಮಲೆನಾಡು ಹಾಗೂ ಬಯಲುಸೀಗಳಲ್ಲಿ ಈರುಳ್ಳಿ ಸೇರಿದಂತೆ ಹಲವು ಬೆಳೆಗಳ ನಾಶಕ್ಕೆ ಪರಿಹಾರ ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿ, ಪ್ರವಾಹ ಹಾಗೂ ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಸರ್ಕಾರ ಈಗಾಗಲೇ ದುಪ್ಪಟ್ಟು ಪರಿಹಾರ ನೀಡುತ್ತಿದೆ. ಈಗಾಗಲೇ 99 ಕೋಟಿ ರೂ.ಗಳಷ್ಟು ಬೆಳೆಪರಿಹಾರವನ್ನು ವಿತರಿಸಲಾಗಿದೆ. ಜಿಲ್ಲಾಡಳಿತ ಬೆಳೆನಾಶಕ್ಕೆ ಜಂಟಿಸರ್ವೇ ಮಾಡಿ ವರದಿ ನೀಡಿದರೆ, ಅದಕ್ಕೂ ಸರ್ಕಾರ ಬೆಳೆಪರಿಹಾರ ನೀಡಲಿದೆ. ಈ ಹಿಂದೆ ಬೆಳೆನಾಶವಾಗಿ ಒಂದು ವರ್ಷವಾದ ನಂತರ ಪರಿಹಾರ ದೊರೆಯುತ್ತಿತ್ತು. ಆದರೆ ಈಗ ಸ್ಪಂದನಾಶೀಲ ಸರ್ಕಾರವಿರುವುದರಿಂದ ರೈತರ ರಕ್ಷಣೆ ಧಾವಿಸಲಾಗಿದ್ದು, ಒಂದೂವರೆ ತಿಂಗಳೊಳಗೆ ಬೆಳೆ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.