ಬೆಂಗಳೂರು: ವ್ಯಾಜ್ಯಗಳ ಶೀಘ್ರ ಪರಿಹಾರಕ್ಕಾಗಿ ಮಧ್ಯಸ್ಥಿಕೆ ಕೇಂದ್ರ ಸ್ಥಾಪನೆ ಸೇರಿದಂತೆ ಇತರೆ ಪೂರಕ ವ್ಯವಸ್ಥೆಗಳನ್ನು ಪೂರೈಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದು ಹೇಳಿದ್ದಾರೆ.
ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ವಕೀಲ ಸಂಘ, ಲೋಕೋಪಯೋಗಿ ಇಲಾಖೆ ಹಾಗೂ ಕಟ್ಟಡ ಸಮಿತಿ ವತಿಯಿಂದ ಆಯೋಜಿಸಿದ್ದ ವಕೀಲರ ಭವನದ 5, 6 ಮತ್ತು 7 ನೇ ಮಹಡಿಯನ್ನು ಉದ್ಘಾಟಿಸಿ ಮಾತಾಡಿದ ಬೊಮ್ಮಾಯಿ, ನಮ್ಮ ಸಮಾಜದಲ್ಲಿ ಬಹಳಷ್ಟು ವ್ಯಾಜ್ಯಗಳಿವೆ. ಇಲ್ಲಿ ನ್ಯಾಯ ದೊರೆಯುವ ವ್ಯವಸ್ಥೆಯಲ್ಲಿಯೂ ಬದಲಾವಣೆ ಆಗಬೇಕಿದೆ. ಇದಕ್ಕಾಗಿ ಲೋಕ ಅದಾಲತ್ ಗಳು ಹಾಗೂ ಮಧ್ಯಸ್ಥಿಕೆಯಿಂದ ವ್ಯಾಜ್ಯಗಳನ್ನು ಪರಿಹರಿಸಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರು ವಕೀಲರ ಲೈಬ್ರರಿ ಡಿಜಿಟಲೀಕರಣಕ್ಕೆ ಸಹಕಾರ :
ವಕೀಲರ ಭವನ ದೊಡ್ಡ ಪ್ರಮಾಣದಲ್ಲಿ ನಿರ್ಮಿಸಿ, ಕುವೆಂಪು ರವರ ಹೆಸರಿಟ್ಟಿರುವುದು ಸಂತೋಷ ತಂದಿದೆ. ವಕೀಲರ ಭವನದಲ್ಲಿ ಮಹಿಳಾ ವಕೀಲರಿಗೆ ಪ್ರತ್ಯೆಕ ಕೊಠಡಿ ಮಾಡಿರುವುದು ಸಂತಸ ತಂದಿದೆ. ಮೊದಲು ದೊಡ್ಡ ಲೈಬ್ರರಿ ಇದ್ದರೆ ದೊಡ್ಡ ವಕೀಲ ಅಂತ ಭಾವಿಸುತ್ತಿದ್ದರು.ಇಂದು ಸಣ್ಣ ಗ್ರಾಮಪಂಚಾಯತಿಯ ಲೈಬ್ರರಿಯೂ ಡಿಜಿಟಲೈಸ್ ಆಗಿದೆ. ಬೆಂಗಳೂರು ವಕೀಲರ ಲೈಬ್ರರಿಯನ್ನು ಡಿಜಿಟಲೀಕರಣ ಮಾಡಲು ಸರ್ಕಾರ ಸಹಕಾರ ನೀಡಲಿದೆ ಎಂದರು.
ನೈತಿಕ ಹಾಗೂ ಮಾನವ ನಿರ್ಮಿತ ಕಾನೂನು ಹತ್ತಿರ ತರಬೇಕು :
ವಕೀಲರ ಪಾತ್ರ ಬಹಳ ಮುಖ್ಯ ಇದೆ. ವಕೀಲರಿಲ್ಲದೇ ನ್ಯಾಯ ದೊರೆಯುವ ವ್ಯವಸ್ಥೆಯಿಲ್ಲ.ನಾವೇ ಮಾಡಿಕೊಂಡ ಕಾನೂನು ಹಾಗೂ ನೈತಿಕ ಕಾನೂನಿನ ನಡುವೆ ವ್ಯತ್ಯಾಸ ಇದೆ. ನೈತಿಕ ಕಾನೂನಿನಲ್ಲಿ ಸತ್ಯ ಹೇಳಿದರೆ ಒಳ್ಳೆಯದಾಗುತ್ತದೆ. ಸುಳ್ಳು ಹೇಳಿದರೆ ಶಿಕ್ಷೆ ಆಗುತ್ತದೆ, ಕಳ್ಳತನ ಮಾಡಿದರೆ ಶಿಕ್ಷೆ ಆಗುತ್ತದೆ ಅಂತ ಇದೆ. ನೈತಿಕ ಕಾನೂನು ಹಾಗೂ ಮಾನವನ ಕಾನೂನು ಹತ್ತಿರ ತರಬೇಕು ಎಂದರು.
ಕಾನೂನಿನಲ್ಲಿ ಗೊಂದಲ ಇರಬಾರದು :
ನೇಪಾಳದಲ್ಲಿ ಒಂದು ಪದ್ದತಿ ಇದೆ. ಅಲ್ಲಿನ ಗುಡ್ಡಗಾಡು ಪ್ರದೇಶದಲ್ಲಿ ಯಾವುದೇ ನ್ಯಾಯಾಲಯಗಳಿಲ್ಲ. ಅಲ್ಲಿನ ಜನರು ಸುಶಿಕ್ಷಿತರಿಲ್ಲದಿದ್ದರೂ, ಅವರಲ್ಲಿಯೇ ನಿಯಮಗಳನ್ನು ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ನಾವು ಸುಶಿಕ್ಷಿತರಾಗಿದ್ದರೂ ಕಾನುನು ಸಮಸ್ಯೆಗಳು ಹೆಚ್ಚಾಗುತ್ತವೆ. ಯಾವುದೇ ಕಾನೂನಿನಲ್ಲಿ ಗೊಂದಲ ಇರಬಾರದು, ಸ್ಪಷ್ಟತೆ ಇರಬೇಕು. ಇಲ್ಲದಿದ್ದರೆ ಸಾಕಷ್ಟು ಸಮಸ್ಯೆ ಉಂಟಾಗುತ್ತದೆ ಎಂದರು.
ಮುಂದಿನ ಬಜೆಟ್ ನಲ್ಲಿ ಬೆಂಗಳೂರು ಲಾಯರ್ಸ್ ಚೇಂಬರ್ಸ್ ಸ್ಥಾಪಿಸಲು ಅನುದಾನ :
ಬೆಂಗಳೂರು ವಕಿಲರ ಸಂಘ ಅತ್ಯಂತ ಮಹತ್ವದಾಗಿ, ವಕೀಲರ ಸಂಘ ಉತ್ತಮ ಕೆಲಸ ಮಾಡುತ್ತಿದೆ. ನ್ಯಾಯಾಧೀಶರ ಹುದ್ದೆಗಳನ್ನು ಶೀಘ್ರದಲ್ಲಿ ತುಂಬಲು ಕ್ರಮ ಕೈಗೊಳ್ಳಲಾಗುವುದು.ಬೆಂಗಳೂರಿಗೆ ಲಾಯರ್ಸ್ ಚೆಂಬರ್ಸ್ ಮಾಡಲು ಮುಂದಿನ ಬಜೆಟ್ ನಲ್ಲಿ ಅನುದಾನ ಒದಗಿಸಲು ಘೋಷಣೆ ಮಾಡಲಾಗುವುದು ಎಂದರು.
ವಕೀಲರಿಗೆ ಬಿಡಿಎ ಪ್ಲಾಟ್ ಗಳನ್ನು ಖರೀದಿಸಲು ಶೇ.10 ರಷ್ಟು ರಿಯಾಯಿತಿ:
ವಕೀಲರ ವಿಮೆ ಯೋಜನೆಯಡಿ ವಕೀಲರ ಹಿತದೃಷ್ಟಿಯಿಂದ ನೀಡಲಾಗಿರುವ ಅನುದಾನ ಸದುಪಯೋಗವಾಗಲು ಬೆಂಗಳೂರು ವಕೀಲ ಸಂಘ ಗಮನಹರಿಸಬೇಕು ಕಾನೂನು ರಕ್ಷಣಾ ಕಾಯ್ದೆಯನ್ನು ಡಿಸೆಂಬರ್ ನಲ್ಲಿ ಬೆಳಗಾವಿ ಅಧಿವೇಶನದಲ್ಲಿ ಮಂಡನೆ ಮಾಡಿ ಅನುಮೋದನೆ ಪಡೆಯಲಾಗುವುದು. ಬೆಂಗಳೂರಿನಲ್ಲಿ ಬಿಡಿಎ ಪ್ಲಾಟ್ ಗಳನ್ನು ಖರೀದಿಸಲು ವಕಿಲರಿಗೆ ಶೇ 10% ರಿಯಾಯಿತಿ ನೀಡಲಾಗುವುದು ಎಂದರು.
ಗುಜರಾತ್ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅರವಿಂದ ಕುಮಾರ್, ರಾಜ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಳೆ, ಕಟ್ಟಡ ಸಮಿತಿ ಅಧ್ಯಕ್ಷ ಬಿ.ವಿ.ಆಚಾರ್ಯ, ಉಪಾಧ್ಯಕ್ಷ ಕೆ.ಎನ್.ಪುಟ್ಟೇ ಗೌಡ, ವಕೀಲರ ಸಂಘದ ಕಾರ್ಯದರ್ಶಿ ಟಿ.ಜಿ.ರವಿ, ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಕೃಷ್ಣಾ ರೆಡ್ಡಿ,ಮೊದಲಾದವರು ಉಪಸ್ಥಿತರಿದ್ದರು.