ಗುವಾಹಟಿ: ರಾಜ್ಯದ ಸರ್ಕಾರಿ ನೌಕರರು ಎರಡನೇ ಮದುವೆಯಾಗುವ ಪೂರ್ವದಲ್ಲಿ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವಶರ್ಮಾ ಹೇಳಿದ್ದಾರೆ.: ತಮ್ಮ ಧರ್ಮದಲ್ಲಿ ಅವಕಾಶ ಇದ್ದರೂ ನೀವು ಸರ್ಕಾರಿ ನೌಕರರಾಗಿದ್ದರೆ ಪೂರ್ವಾನುಮತಿ ಕಡ್ಡಾಯ ಎಂದು ಹೇಳಿದ್ದಾರೆ. ಅಲ್ಲದೇ, ಸಂಗಾತಿಯು ಜೀವಂತವಿದ್ದಾಗಲೇ ಸರ್ಕಾರಿ ನೌಕರರು ಎರಡನೇ ಮದುವೆಯಾಗುವುದು ನಿಷಿದ್ಧ ಎಂದಿದ್ದಾರೆ. ಇದು ಹಳೆಯ ನಿಯಮವಾಗಿದೆ ಎಂದೂ ಸಿಎಂ ಹೇಳಿದ್ದಾರೆ.
ಈ ನಿಯಮವನ್ನು ಮೀರಿದರೆ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
‘ನೌಕರನ ಸಾವಿನ ಬಳಿಕ ಆತನ ದ್ವಿಪತ್ನಿಯರು ಪಿಂಚಣಿಗೆ ಜಗಳವಾಡುವ ಪ್ರಕರಣಗಳು ಆಗಾಗ್ಗೆ ಬರುತ್ತಿರುತ್ತವೆ. ಇಂತಹ ವಿವಾದ ಬಗೆಹರಿಸುವುದು ಕಷ್ಟಕರ. ಕೆಲ ವಿಧವೆಯರು ವಿವಾದದ ಕಾರಣದಿಂದ ಸೌಲಭ್ಯ ವಂಚಿತರಾಗುತ್ತಾರೆ. ಈ ನಿಯಮ ಹಿಂದೆಯೂ ಇತ್ತು. ಆದರೆ, ಜಾರಿಯಾಗಿರಲಿಲ್ಲ. ಈಗ ನಾವು ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ತೀರ್ಮಾನಿಸಿದ್ದೇವೆ’ ಎಂದು ವಿವರಿಸಿದರು.
ಈ ನಿಯಮವನ್ನು ಹಿಂದೆ ಬಿಜೆಪಿ ನೇತೃತ್ವದ ಸರ್ಕಾರ ರೂಪಿಸಿತ್ತು. ಆದರೆ, ಇದನ್ನು ಆದೇಶವಾಗಿ ಜಾರಿಗೊಳಿಸಿದ್ದು ಈ ಮೊದಲು ಜಾರಿಯಲ್ಲಿದ್ದ ಕಾಂಗ್ರೆಸ್ ಪಕ್ಷದ ಸರ್ಕಾರ ಎಂದು ಅವರು ತಿಳಿಸಿದರು.