ರಾಜ್ಯಾದ್ಯಂತ ಭುವನೇಶ್ವರಿಯ ಏಕರೂಪದ ಭಾವಚಿತ್ರ ಬಳಸಲು ಸರ್ಕಾರಿ ಆದೇಶ

Prasthutha|

ಬೆಂಗಳೂರು: ರಾಜ್ಯಾದ್ಯಂತ ಕನ್ನಡ ತಾಯಿ ಭುವನೇಶ್ವರಿಯ ಏಕರೂಪದ ಭಾವಚಿತ್ರವನ್ನು ಬಳಸಲು ಸರ್ಕಾರಿ ಆದೇಶ ಹೊರಡಿಸಲಿದೆ.

- Advertisement -

ವಿಧಾನಸೌಧದಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಇಂಧನ ಮತ್ತು ಕನ್ನಡ,ಸಂಸ್ಕೃತಿ ಖಾತೆ ಸಚಿವ ವಿ.ಸುನೀಲ್ ಕುಮಾರ್ ಈ ವಿಷಯ ತಿಳಿಸಿದರು.

ರಾಜ್ಯದಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಭಾವಚಿತ್ರವನ್ನು ಬಳಸುವಾಗ ದುರ್ಗಾದೇವಿ, ಸರಸ್ವತಿ ಸೇರಿದಂತೆ ಹಲವು ಚಿತ್ರಗಳನ್ನು ಬಳಸುವ ಕೆಲಸವಾಗುತ್ತಿದೆ. ಹೀಗಾಗಿ ಕನ್ನಡ ತಾಯಿ ಭುವನೇಶ್ವರಿಯ ಏಕರೂಪದ ಚಿತ್ರವನ್ನು ಸರ್ಕಾರವೇ ಬಿಡುಗಡೆ ಮಾಡಲಿದೆ ಎಂದರು.

- Advertisement -

ಈ ಸಂಬಂಧ ರಚಿಸಲಾದ ಡಿ.ಮಹೇಂದ್ರ ನೇತೃತ್ವದ ಸಮಿತಿ ನಾಡಗೀತೆಯಿಂದ ಹಿಡಿದು ಕರ್ನಾಟಕದ ಸಕಲ ವೈಶಿಷ್ಟ್ಯಗಳನ್ನು ಗಮನಿಸಿ ಕಲಾವಿದ ಸೋಮಶೇಖರ್ ಅವರ ಮೂಲಕ ಭುವನೇಶ್ವರಿಯ ಚಿತ್ರವೊಂದನ್ನು ತಯಾರಿಸಿ ಸರ್ಕಾರಕ್ಕೆ ಶಿಫಾರಸು ಮಾಡಿದ್ದು ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅದನ್ನು ಒಪ್ಪಿದೆ ಎಂದರು.

ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅವರ ಒಪ್ಪಿಗೆ ಪಡೆದ ನಂತರ ತಾಯಿ ಭುವನೇಶ್ವರಿಯ ಭಾವಚಿತ್ರವನ್ನು ಸರ್ಕಾರ ಬಿಡುಗಡೆ ಮಾಡಲಿದ್ದು ಸರ್ಕಾರಿ ಕಚೇರಿಗಳಲ್ಲಿ ಇದನ್ನು ಅಳವಡಿಸಲಾಗುತ್ತದೆ ಎಂದರು.

ಕನ್ನಡ ನಾಡಿನ ಹಲವು ವಿಶೇಷಗಳನ್ನು ಚಿತ್ರ ಒಳಗೊಂಡಿದ್ದು ಈ ಚಿತ್ರವೇ ಇನ್ನು ಮುಂದೆ ರಾಜ್ಯದ ಎಲ್ಲ ಕಡೆ ಪ್ರದರ್ಶಿತವಾಗಬೇಕು ಎಂದು ಅವರು ಸ್ಪಷ್ಟಪಡಿಸಿದರು.

ಹೊಯ್ಸಳರು, ಕದಂಬರು, ಮೈಸೂರು ಅರಸರು ಸೇರಿದಂತೆ ರಾಜ್ಯವನ್ನು ಆಳಿದ ಹಲವು ಪವ್ರಮುಖ ರಾಜಮನೆತನಗಳ ವೈಶಿಷ್ಟ್ಯಗಳು ತಾಯಿ ಭುವನೇಶ್ವರಿಯ ಚಿತ್ರದಲ್ಲಿದ್ದು ಇದೇ ಇನ್ನು ಮುಂದೆ ಅಧಿಕೃತ ಚಿತ್ರವಾಗಲಿದೆ ಎಂದು ವಿವರಿಸಿದರು.

ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಬೇಕು ಎಂಬ ಸಂಬಂಧ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ ಅವರು, ಸರೋಜಿನಿ ಮಹಿಷಿ ವರದಿಯ ಅನುಸಾರ ರಾಜ್ಯದ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಕೆಲಸ ಕೊಡುವುದನ್ನು ಕಡ್ಡಾಯಗೊಳಿಸಲಾಗುವುದು ಎಂದರು.

ರಾಜ್ಯಕ್ಕೆ ಬರುವ ಕೈಗಾರಿಕೆಗಳು ಕನ್ನಡಿಗರಿಗೆ ನಿರ್ದಿಷ್ಟ ಪ್ರಮಾಣದ ಉದ್ಯೋಗ ನೀಡಬೇಕು. ಇಲ್ಲದಿದ್ದರೆ ಅವುಗಳಿಗೆ ಸರ್ಕಾರದಿಂದ ಕೊಡುವ ಸವಲತ್ತುಗಳನ್ನು ಸ್ಥಗಿತಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

ಕನ್ನಡ ನಾಮಫಲಕಗಳು ಕಡಿಮೆಯಾಗುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಇಂತಿಷ್ಟು ಪ್ರಮಾಣದಲ್ಲಿ ಕನ್ನಡ ನಾಮಫಲಕಗಳ ಬಳಕೆ ಕಡ್ಡಾಯ ಎಂದು ಸೂಚನೆ ನೀಡುವುದಾಗಿ ಸಚಿವ ಸುನೀಲ್ ಕುಮಾರ್ ಭರವಸೆ ನೀಡಿದರು.

ಕರ್ನಾಟಕದಾದ್ಯಂತ ಇರುವ ಮತ್ತು ಈಗ ನಶಿಸುತ್ತಿರುವ ಕಲೆಗಳನ್ನು ಪುನರುಜ್ಜೀವನಗೊಳಿಸಲು ಡಿಸೆಂಬರ್ ಆರರಿಂದ ಎರಡು ತಿಂಗಳ ಕಾಲ ಶಿಬಿರಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಲಂಬಾಣಿ ನೃತ್ಯವೂ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಇರುವ ಕಲೆಗಳು ನಶಿಸುತ್ತಿದ್ದು, ಇವುಗಳನ್ನು ಮೂಲ ಕನ್ನಡ ಸಂಸ್ಕೃತಿಯ ಹೆಸರಿನಲ್ಲಿ ಪುನರುಜ್ಜೀವಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದರು.

ಜಿಲ್ಲೆ, ವಿಭಾಗ ಮತ್ತು ರಾಜ್ಯ ಮಟ್ಟದಲ್ಲಿ ಈ ಕಲೆಗಳನ್ನುಪುನರುಜ್ಜೀವಗೊಳಿಸುವ ಕೆಲಸ ಮಾಡಿದರೆ ಮತ್ತು ಅವುಗಳಿಗೆ ಆಧುನಿಕತೆಯ ಸ್ಪರ್ಶ ನೀಡಿದರೆ ಕನ್ನಡ ನಾಡಿನ ಆಸ್ಮಿತೆಯನ್ನು ಉಳಿಸಿದಂತಾಗುತ್ತದೆ ಎಂದು ವಿವರಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ ಇರುವ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ,ಇದನ್ನು ಗಣನೀಯ ಪ್ರಮಾಣದಲ್ಲಿ ಕುಗ್ಗಿಸಲಾಗಿದೆ ಎಂದು ಮಾರ್ಮಿಕವಾಗಿ ನುಡಿದರು.

ಹಾವೇರಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಸಿರ್ಸಿಯಿಂದ ತಾಯಿ ಭುವನೇಶ್ವರಿಯ ರಥ ಹೊರಡಲಿದ್ದು, ಇದೇ ರೀತಿ ಇಪ್ಪತ್ತು ಜಿಲ್ಲೆಗಳಿಂದ ಭುವನೇಶ್ವರಿಯ ರಥ ಹೊರಟು ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಹಾವೇರಿಯನ್ನು ತಲುಪಲಿದೆ ಎಂದರು.

Join Whatsapp