ಕಾನ್ಪುರ: ಮಹಿಳಾ ನೌಕರರೊಬ್ಬರಿಗೆ ಕಿರುಕುಳ ನೀಡಿದ ಆರೋಪದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿಯನ್ನು ಬಂಧಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಲ್ಲಿ ವಿಭಾಗ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಇಚ್ಚರಾಮ್ ಯಾದವ್ ಎಂಬಾತನೆ ಬಂಧಿತ ಆರೋಪಿಯಾಗಿದ್ದಾನೆ.
ಅಧೀನ ಕಾರ್ಯದರ್ಶಿಯಾಗಿ ಯಾದವ್ 2018 ರಿಂದ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಸಂತ್ರಸ್ತೆ ಮಹಿಳೆ ಆರೋಪಿಸಿದ್ದಾರೆ. ಈ ಸಂಬಂಧ ದೂರು ನೀಡಿದರೆ ಕರ್ತವ್ಯದಿಂದ ವಜಾಗೊಳಿಸುವ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಇತ್ತೀಚಿನ ದಿನಗಳಲ್ಲಿ ಆತನ ಕಿರುಕುಳ ಜಾಸ್ತಿಯಾದಾಗ ಧೈರ್ಯ ತಂದುಕೊಂಡು ಆರೋಪಿ ಯಾದವ್ ನ ವೀಡಿಯೋ ಮಾಡಿ ವೈರಲ್ ಮಾಡಿದ್ದೇನೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ. ಯಾದವ್, ಸಂತ್ರಸ್ತೆ ಮಹಿಳೆಯನ್ನು ಲೈಂಗಿಕ ಕ್ರಿಯೆಗೆ ಬಲವಂತ ಪಡಿಸುತ್ತಿರುವಾಗ ಆ ಮಹಿಳೆ, ಆತನನ್ನು ದೂರ ತಳ್ಳುತ್ತಿರುವುದು ಈ ವೀಡಿಯೋದಲ್ಲಿದೆ.
ಈ ಸಂಬಂಧ ಆಕ್ಟೋಬರ್ 29 ರಂದು ಮಹಿಳೆ ನೀಡಿದ ದೂರಿನನ್ವಯ ಹುಸೈಂಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.