ನವದೆಹಲಿ: ಭಾರತದ ವಿರುದ್ಧ ನಕಲಿ ಸುದ್ದಿಗಳನ್ನು ಹರಡುತ್ತಿದೆ ಎಂಬ ಆರೋಪದ ಮೇರೆಗೆ ಪಾಕಿಸ್ತಾನದಿಂದ ಕಾರ್ಯಚರಿಸುತ್ತಿರುವ 35 ಯೂಟ್ಯೂಬ್ ಸುದ್ದಿ ಚಾನೆಲ್ ಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶಿಸಿದೆ.
ಭಾರತ ಸಚಿವಾಲಯ ನಿರ್ಬಂಧಿಸಿದ ಯೂಟ್ಯೂಬ್ ಖಾತೆಗಳ ಒಟ್ಟು ಚಂದಾದಾರರ ಸಂಖ್ಯೆ 1.20 ಕೋಟಿ ಮತ್ತು 130 ಕೋಟಿಗೂ ಹೆಚ್ಚಿನ ವೀಡಿಯೋಗಳನ್ನು ವೀಕ್ಷಿಸಲಾಗಿದೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಇದರ ಹೊರತಾಗಿ ಹೆಚ್ಚುವರಿಯಾಗಿ ಎರಡು ಟ್ವಿಟ್ಟರ್ ಖಾತೆ, ಎರಡು ಇನ್ ಸ್ಟಾ ಗ್ರಾಮ್ ಖಾತೆ, ಒಂದು ಫೇಸ್ಬುಕ್ ಖಾತೆಯನ್ನು ಭಾರತದ ವಿರುದ್ಧ ಸುಳ್ಳು ಮಾಹಿತಿಯನ್ನು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ನಿರ್ಬಂಧಿಸಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆ 2021, ಸೆಕ್ಷನ್ 16 ರ ಅಡಿಯಲ್ಲಿ ಹೊರಡಿಸಲಾದ ಆದೇಶದನ್ವಯ ಪಾಕಿಸ್ತಾನ ಮೂಲದ ಸಾಮಾಜಿಕ ಮಾಧ್ಯಮ ಖಾತೆ ಮತ್ತು ವೆಬ್ ಸೈಟ್ ಗಳನ್ನು ನಿರ್ಬಂಧಿಸಲು ಆದೇಶಿಸಿದೆ.