ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬಿಜೆಪಿಯ ಗುಲಾಮ: ಶಾಹುಲ್‌ ಹಮೀದ್ ಆಕ್ರೋಶ

Prasthutha|

- Advertisement -

ಮಂಗಳೂರು: ಬ್ಲ್ಯಾಕ್‌ಮೇಲ್ ಹಿನ್ನೆಲೆಯುಳ್ಳ ಖಾಸಗಿ ವ್ಯಕ್ತಿಯ ದೂರನ್ನು ಆದರಿಸಿ ನಿಯಮಬಾಹಿರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಕರ್ನಾಟಕದ ರಾಜ್ಯಪಾಲರು ಬಿಜೆಪಿಯ ಗುಲಾಮ‌ ಎಂಬುದನ್ನು ನಿರೂಪಿಸಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ‌ ಅಧ್ಯಕ್ಷ ಕೆ.ಕೆ ಶಾಹುಲ್ ಹಮೀದ್ ಹೇಳಿದರು.

ಕರ್ನಾಟಕದ ರಾಜ್ಯಪಾಲರ ಕಚೇರಿ ಬಿಜೆಪಿ ಕಚೇರಿಯಾಗಿ ಬದಲಾಗಿದೆ ಎಂದ ಅವರು ರಾಜ್ಯಪಾಲರ ತೀರ್ಮಾನ ಕಾನೂನು ವಿರೋಧಿ ಮತ್ತು ಅಸಾಂವಿಧಾನಿಕ ಎಂದರು.

- Advertisement -

ಸಿಎಂ ವಿರುದ್ಧ ದೂರು ದಾಖಲಾಗಿ 24 ಗಂಟೆಯೊಳಗೆ ನೋಟಿಸ್ ಕೊಟ್ಟು ಒಂದು ವಾರದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿರುವ ರಾಜ್ಯಪಾಲರ ತರಾತುರಿ ನೋಡಿದರೆ ಅವರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿರುವುದು ಸ್ಪಷ್ಟವಾಗಿ ಗೋಚರಿಸಿದೆ. 136 ಶಾಸಕರ ಬೆಂಬಲದ ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸಲು, ನಿಷ್ಕಳಂಕ ಮತ್ತು ಪ್ರಾಮಾಣಿಕ ರಾಜಕಾರಣಿಯಾಗಿರುವ ಸಿದ್ದರಾಮಯ್ಯ ಅವರಿಗೆ ಮಸಿ ಬಳಿಯಲು ಕೇಂದ್ರ ಸರಕಾರ ಮತ್ತು ಬಿಜೆಪಿ ಮಾಡಿರುವ ಷಡ್ಯಂತ್ರದಲ್ಲಿ ರಾಜ್ಯಪಾಲರು ಭಾಗಿಯಾಗಿರುವುದು ಸಾಮವಿಧಾನಿಕ ಹುದ್ದೆಗೆ ಮಾಡಿರುವ ಅಪಮಾನವಾಗಿದೆ.‌ ಇಂತಹ ರಾಜ್ಯಪಾಲರು ಕರ್ನಾಟಕಕ್ಕೆ ಕಳಂಕ, ಬಿಜೆಪಿಯ ಏಜೆಂಟ್ ಥರ ಕೆಲಸ ನಿರ್ವಹಿಸುವ ರಾಜ್ಯಪಾಲರು ತಕ್ಷಣವೇ ಕರ್ನಾಟಕ ಬಿಟ್ಟು ತೊಲಗಬೇಕು, ಅವರು ರಾಜ್ಯಪಾಲರಾಗಿ ಮುಂದುವರಿಯಲು ನೈತಿಕತೆ ಕಳೆದುಕೊಂಡಿದ್ದಾರೆ, ಅವರು ಶೀಘ್ರವೇ ರಾಜೀನಾಮೆ ನೀಡಿ ಮೋದಿ ಮತ್ತು ಅಮಿತ್ ಶಾ ಅವರ ಮನೆ ಕೆಲಸಕ್ಕೆ ಸೇರಿಕೊಳ್ಳಲಿ ಎಂದು ಕೆ.ಕೆ ಶಾಹುಲ್ ಹಮೀದ್ ಹೇಳಿದರು.

ಕರ್ನಾಟಕದ ಬಡವರು, ಜನಸಾಮಾನ್ಯರು, ಅಹಿಂದ ವರ್ಗ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಸಿದ್ದರಾಮಯ್ಯ ಅವರ ಜೊತೆ ನಿಂತಿದ್ದಾರೆ. ಬಿಜೆಪಿ‌ಯ ಈ ದ್ವೇಷದ ರಾಜಕೀಯ ಅವರಿಗೆ ಮುಂದಿನ‌ ದಿನಗಳಲ್ಲಿ ಮುಳುವಾಗಲಿದೆ ಎಂದರು.



Join Whatsapp