ಆದಿವಾಸಿಗಳ ಘನತೆಯ ಬದುಕಿಗೆ ಸರ್ಕಾರಗಳು ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿ ಕಾಲಮಿತಿಯೊಳಗೆ ಜಾರಿಗೊಳಿಸಬೇಕು: ಅಬ್ದುಲ್ ಮಜೀದ್

Prasthutha|

ಕುಶಾಲನಗರ: ವಿಶ್ವ ಆದಿವಾಸಿಗಳ ಅಂತರಾಷ್ಟ್ರೀಯ ದಿನವನ್ನು, ಸೋಶಿಯಲ್ ಡೆಮಾಕ್ರಟಿಕ್  ಪಾರ್ಟಿ ಆಫ್ ಇಂಡಿಯಾ “ವಿಶ್ವ ಆದಿವಾಸಿ  ಸ್ವಾಭಿಮಾನ ದಿನ” ಎಂಬ ಹೆಸರಿನಲ್ಲಿ ದೇಶದ ವಿವಿಧ ಭಾಗಗಳಲ್ಲಿ ಆದಿವಾಸಿಗಳ ಪರಂಪರೆ, ಅವರ ಹಕ್ಕುಗಳು,ಅವರ ಪ್ರಸ್ತುತ ಜೀವನ ಪರಿಸ್ಥಿತಿಗಳು, ಅವರು ಎದುರಿಸುತ್ತಿರುವ ಅಪಾಯಗಳು, ಸವಾಲುಗಳು ಮತ್ತು ಶೋಷಣೆಗಳ ಬಗ್ಗೆ ಕಾರ್ಯಕ್ರಮಗಳನ್ನು ರೂಪಿಸಿ ದೇಶದ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.

- Advertisement -

ವಿಶ್ವ ಆದಿವಾಸಿ ಸ್ವಾಭಿಮಾನ ದಿನವಾದ ಇಂದು ಎಸ್.ಡಿ.ಪಿ.ಐ, ಕೊಡಗು ಜಿಲ್ಲಾ ಸಮಿತಿ ವತಿಯಿಂದ, ಕುಶಾಲನಗರ ನಗರದ ಎಸ್ ಡಿ ಪಿ ಐ ಕಚೇರಿಯಲ್ಲಿ ” ಆಧುನಿಕ ಭಾರತದಲ್ಲಿ ಆದಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳು ” ಎಂಬ ವಿಚಾರ ಸಂಕಿರಣದಲ್ಲಿ ವಿಷಯವನ್ನು ಮಂಡಿಸಿದ ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜಿದ್, ಸ್ವಾತಂತ್ರ್ಯ ದೊರೆತು 75 ವರ್ಷ ಕಳೆದರೂ ದೇಶದ ಸರಿಸುಮಾರು ಶೇಕಡ 9ರಷ್ಟಿರುವ ಆದಿವಾಸಿಗಳ ಬದುಕು ಶೋಚನೀಯವಾಗಿಯೇ ಇದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದಿರುವ ಆದಿವಾಸಿಗಳ ಒಟ್ಟು ಸಬಲೀಕರಣಕ್ಕೆ ರಚನಾತ್ಮಕ ಯೋಜನೆಗಳನ್ನ ರೂಪಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

 ಆದಿವಾಸಿಗಳು ಭಾರತೀಯ ಸಮಾಜದ ಮುಖ್ಯ ವಾಹಿನಿಯ ಪೂರ್ವಗ್ರಹಗಳ ಕಾರಣಕ್ಕೆ ನಿರಂತರ ಹಿಂಸಾಚಾರಕ್ಕೆ ಬಲಿಪಶುಗಳಾದರು. ಆದಿವಾಸಿಗಳ ಮೂಲ ಸಂಸ್ಕೃತಿ, ವಿಶಿಷ್ಟವಾದ ಜೀವನ ಶೈಲಿ, ಆದಿವಾಸಿಗಳ ಭಾಷೆ ಇವತ್ತು ಕಣ್ಮರೆಯಾಗುತ್ತಿದೆ. ಇದಕ್ಕೆ ಮೂಲ ಕಾರಣ ಅವರ ಆರ್ಥಿಕ ಮೂಲಗಳ ನಾಶ ಮತ್ತು ಅವರು ವಾಸಿಸುವ ಭೂಮಿಗೆ ಎದುರಾಗುವ ಬೆದರಿಕೆಗಳು. ಬಂಡವಾಳಶಾಹಿ ಕಾರ್ಪೊರೇಟ್ ಜಗತ್ತು ಗಣಿಗಾರಿಕೆಗಾಗಿ ಅರಣ್ಯ ಪ್ರದೇಶವನ್ನು ವಶಪಡಿಸಿ ಕೊಂಡ ಕಾರಣ, ಆದಿವಾಸಿಗಳು ತಮ್ಮ ಮೂಲ ವಾಸ ಪ್ರದೇಶವಾದ ಅಡವಿಗಳಿಂದ ಹೊರಹಾಕಲ್ಪಟ್ಟಿದ್ದಾರೆ.

- Advertisement -

 ಕೊಡಗಿನಲ್ಲೂ ಸಹ ಆದಿವಾಸಿಗಳ ಬದುಕು ಅತ್ಯಂತ ಶೋಚನೀಯವಾಗಿದೆ. ಯಾವುದೇ ಸರ್ಕಾರಗಳು ಆದಿವಾಸಿಗಳ ವಿಶಿಷ್ಟ ಜೀವನ ಪದ್ಧತಿಯ ಸಂರಕ್ಷಣೆ, ಆಹಾರ, ಶಿಕ್ಷಣ, ಭೂಮಿ, ಆರೋಗ್ಯ ಮತ್ತು ಆಶ್ರಯದಂತಹ ಮೂಲಭೂತ ಹಕ್ಕುಗಳನ್ನು ನೀಡುವುದರಲ್ಲಿ ವಿಫಲವಾಗಿದೆ. ಆದಿವಾಸಿಗಳ ಸಂವಿಧಾನಬದ್ಧವಾದ ಎಲ್ಲಾ ಹಕ್ಕುಗಳು ಮತ್ತು ಬೇಡಿಕೆಗಳನ್ನು ಎಸ್.ಡಿ.ಪಿ.ಐ ಬೆಂಬಲಿಸುತ್ತದೆ ಮತ್ತು ಆದಿವಾಸಿಗಳ  ಮೂಲಭೂತ ಹಕ್ಕುಗಳನ್ನು ಕಾಲಮಿತಿಯೊಳಗೆ ಈಡೇರಿಸಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತದೆ.

ಈ ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಪಿ.ಐ ಕೊಡಗು ಜಿಲ್ಲಾಧ್ಯಕ್ಷ ಅಬ್ದುಲ್ಲ ಅಡ್ಕರ್ ವಹಿಸಿ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಆದಿವಾಸಿ ಮುಖಂಡರಾದ ಸ್ವಾಮಿ ಮತ್ತು ಅನಿತಾ ಮಾತನಾಡಿದರು. ಸಭೆಯನ್ನು ಉದ್ದೇಶಿಸಿ ಸಿಪಿಎಂಎಲ್ ರೆಡ್ ಸ್ಟಾರ್ ಮುಖಂಡರಾದ ಮಂಜುನಾಥ್, ವಿಮೆನ್ ಇಂಡಿಯಾ ಮೂವ್ಮೆಂಟ್ ನ ರಾಜ್ಯ ಕಾರ್ಯದರ್ಶಿ ತನುಜಾವತಿ ಮಾತನಾಡಿದರು.

 ಈ ಸಂದರ್ಭದಲ್ಲಿ ದಿಡ್ಡಲ್ಲಿ ಹೋರಾಟದಲ್ಲಿ ಮುಖ್ಯ ಪಾತ್ರ ವಹಿಸಿದ್ದ ಅನಿತಾ, ಸ್ವಾಮಿ, ಮುತ್ತಣ್ಣ ಬಾಬು ಮತ್ತು ಮೋಹನ್ ರವರನ್ನು ಸನ್ಮಾನಿಸಲಾಯಿತು. ಸಿಪಿಎಂಎಲ್ ಮುಖಂಡ ಸಣ್ಣಪ್ಪ ಸಭೆಯಲ್ಲಿ ಹಾಜರಿದ್ದರು.  ಕಾರ್ಯಕ್ರಮಕ್ಕೆ ಎಸ್.ಡಿ.ಪಿ.ಐ ಕುಶಾಲನಗರ ಟೌನ್ ಅಧ್ಯಕ್ಷ ಝಕರಿಯ ಸ್ವಾಗತ ಕೋರಿದರು. ಎಸ್.ಡಿ.ಪಿ.ಐ ಜಿಲ್ಲಾ ಉಪಾಧ್ಯಕ್ಷೆ ಮೇರಿ ವೇಗಸ್ ಕಾರ್ಯಕ್ರಮ ನಿರೂಪಿಸಿದರು. ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿ ಕೊಡಗು ಜಿಲ್ಲಾಧ್ಯಕ್ಷ ಮತ್ತು ಮಡಿಕೇರಿ ನಗರಸಭಾ ಸದಸ್ಯ ಅಮೀನ್ ಮೊಹ್ಸಿನ್ ಸಮಾರೋಪ ಭಾಷಣ ಮಾಡಿದರು. ಮಡಿಕೇರಿ ನಗರಸಭಾ ಸದಸ್ಯ ಮನ್ಸೂರ್ ವಂದನೆಗಳನ್ನು ಸಲ್ಲಿಸಿದರು.

Join Whatsapp