ಬೆಂಗಳೂರು: ರಾಜ್ಯ ಸರ್ಕಾರದಿಂದ ರಾಜ್ಯ, ಜಿಲ್ಲಾ ಮಟ್ಟದಲ್ಲಿ ಸಮಾಜ ಸುಧಾರಕರ ನಾರಾಯಣ ಗುರುಗಳ ಜಯಂತಿ ಆಚರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾರಾಯಣ ಗುರುಗಳ ಜಯಂತಿ ಆಚರಿಸುವಂತೆ ಸಚಿವ ಮಧು ಬಂಗಾರಪ್ಪಗೆ ಹೇಳಿದ್ದೆ. ಜಾತಿ ವ್ಯವಸ್ಥೆ ಹೋಗಬೇಕು, ಸಮಸಮಾಜ ನಿರ್ಮಾಣವಾಗಬೇಕು. ಬುದ್ಧ, ಬಸವ, ಕನಕದಾಸರು ಕಂದಾಚಾರ, ಮೌಢ್ಯಗಳನ್ನು ಧಿಕ್ಕರಿಸಿದ್ದರು. ನಾರಾಯಣ ಗುರುಗಳು ಕೇರಳದಲ್ಲಿ ಇಳವ ಜಾತಿಯಲ್ಲಿ ಹುಟ್ಟಿದವರು ಎಂದು ಹೇಳಿದ್ದಾರೆ.
ಕೇರಳದಲ್ಲಿ ಅಸ್ಪೃಶ್ಯತೆ ಇತ್ತು. ನಾರಾಯಣ ಗುರುಗಳು ಅದನ್ನು ಅನುಭವಿಸಿದರು. ಶೂದ್ರರನ್ನು ದೇವಸ್ಥಾನಕ್ಕೆ ಬಿಡಲಿಲ್ಲವೆಂದರೆ ನೀವು ದೇವಸ್ಥಾನ ಕಟ್ಕೊಳ್ಳಿ ಎಂದು ಕೇರಳದಲ್ಲಿ 60 ದೇವಸ್ಥಾನ ನಿರ್ಮಾಣ ಮಾಡಿದ್ದರು. ನಾನೊಮ್ಮೆ ಕೇರಳದ ದೇವಸ್ಥಾನಕ್ಕೆ ಹೋಗಿದ್ದಾಗ ಬಟ್ಟೆ ತೆಗೆದು ಬನ್ನಿ ಅಂದಿದ್ದರು. ನಾನು ಇಲ್ಲಿಂದಲೇ ಕೈಮುಗಿಯುತ್ತೇನೆ ಎಂದು ಹೇಳಿ ಹೊರಟು ಬಂದುಬಿಟ್ಟೆ ಎಂದರು.