ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ. ಸಿಎಂ ಇದ್ದಾರ ಇಲ್ಲವೋ ಗೊತ್ತಾಗುತ್ತಿಲ್ಲ. ದಿನಕ್ಕೊಂದು ವಿವಾದಗಳನ್ನು ಸೃಷ್ಟಿಸಿ ಸಂಘಪರಿವಾರ, ಬಜರಂಗದಳದವರು ತಾವೇ ಸಿಎಂ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವಿವಾದ ನಡೆಯುತ್ತಿದರೂ ನಿಯಂತ್ರಿಸುವ ಧಮ್ಮು ಸರ್ಕಾರಕ್ಕಿಲ್ಲದಾಗಿದೆ. ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ. ಹಿಜಾಬ್ ವಿವಾದಿಂದ ಹಿಡಿದು ಈವರೆಗೆ ದಿನಕ್ಕೊಂದು ಬೆಳವಣಿಗಳು ನಡೆಯುತ್ತಿದೆ. ಧಮ್ಮಿಲ್ಲದ ಸರ್ಕಾರ ಕೆಲಸಕ್ಕೆ ಬಾರದ ವಿಚಾರಗಳನ್ನು ಇಟ್ಟು ವಿವಾದಗಳನ್ನು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಸಿಎಂ ಬಸವರಾಜ್ ಬೊಮ್ಮಾಯಿ ಆರ್ ಎಸ್ ಎಸ್ ಕೈಗೊಂಬೆಯಾಗಿದ್ದು, ಮೂಕ ಬಸವ ಆಗಿದ್ದಾರೆ. ಹಿಜಾಬ್ ವಿವಾದ ಸೃಷ್ಟಿಯಾಗಿ ಅದು ಸುಪ್ರೀಂ ಕೋರ್ಟ್ ವರೆಗೆ ಹೋಯಿತು ಎಂದರೆ ಏನರ್ಥ? ಸರ್ಕಾರಕ್ಕೆ ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗಿಲ್ಲ ಎಂದರ್ಥ. ಪೆಟ್ರೋಲ್, ಡೀಸೆಲ್ ದರ, ಬೆಲೆ ಏರಿಕೆಯಿಂದಾಗಿ ಜನರು ತತ್ತರಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರದ ಯಾರೊಬ್ಬರೂ ಮಾತನಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.