ಬೆಂಗಳೂರು: ರಾಜ್ಯದಲ್ಲಿ ಮುಸ್ಲಿಂ ಧಾರ್ಮಿಕ ಕೇಂದ್ರಗಳ ಮೇಲೆ ಕರ್ನಾಟಕ ಸರ್ಕಾರ ಹಸ್ತಕ್ಷೇಪ ಮಾಡಲು ಹೊರಟಿರುವುದು ಅಸಾಂವಿಧಾನಿಕವಾಗಿದೆ. ಇದನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ಖಂಡಿಸುತ್ತಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕುಂಬ್ರ ಎಂದು ತಿಳಿಸಿದ್ದಾರೆ.
ಮದರಸಾ ಶಿಕ್ಷಣಕ್ಕೆ ಸರ್ಕಾರದ ಅಧೀನದಲ್ಲಿ ಮಂಡಳಿ ರೂಪಿಸಲು ಮುಂದಾಗಿದ್ದು ಅದರ ಮುಖಾಂತರ ಧಾರ್ಮಿಕ ಶಿಕ್ಷಣದಲ್ಲಿ ಹಸ್ತಕ್ಷೇಪ ನಡೆಸಿ ಆರೆಸ್ಸೆಸ್ ಗುಪ್ತ ಅಜೆಂಡಾಗಳನ್ನು ಸರ್ಕಾರ ಮದರಸ ವ್ಯವಸ್ಥೆಯಲ್ಲಿ ಅಳವಡಿಸಲು ನಡೆಸುತ್ತಿರುವ ಪ್ರಯತ್ನವು ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಲ್ಪಸಂಖ್ಯಾತ ಧಾರ್ಮಿಕ ಶಿಕ್ಷಣ ವ್ಯವಸ್ಥೆಯ ಮೇಲೆ ಬಿಜೆಪಿ ಸರಕಾರದ ಕಾನೂನು ಬಾಹಿರವಾದ ಹಸ್ತಕ್ಷೇಪವು ಸಂವಿಧಾನದ 29 ಮತ್ತು 30 ನೇ ಪರಿಚ್ಛೇದದ ನೇರ ಉಲ್ಲಂಘನೆಯಾಗಿದ್ದು, ಸರ್ಕಾರ ಇಂತಹ ಮಂಡಳಿ ರೂಪಿಸುವುದು ಅಸಾಂವಿಧಾನಿಕ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಬೆಳೆಸಿ, ಅಭಿವೃದ್ಧಿಪಡಿಸುವುದು ಸಂವಿಧಾನದ ಪ್ರತಿಪಾದನೆಯಾಗಿದೆ. ಆದರೆ ಸಂವಿಧಾನಕ್ಕೆ ಬೆಲೆ ಕೊಡದೆ ಸಂಘದ ಹಿತಾಸಕ್ತಿಗೋಸ್ಕರ ತೆಗೆದುಕೊಳ್ಳುವ ಇಂತಹ ನಿರ್ಧಾರಗಳು ಸರ್ವಾಧಿಕಾರ ಧೋರಣೆಯ ಅನಾವರಣವಾಗಿದೆ.
ಇಂತಹ ಮಂಡಳಿಗೆ ಯಾವತ್ತೂ ಮದರಸ ಕಮಿಟಿಗಳು ಒಪ್ಪಿಗೆ ನೀಡದೆ ಈ ಆರೆಸ್ಸೆಸ್ ಪ್ರಾಯೋಜಿತ ಗುಪ್ತ ಅಜೆಂಡಾಗಳನ್ನು ಸೋಲಿಸಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕುಂಬ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ