ಲಕ್ನೋ: ಸರ್ಕಾರಿ ನೌಕರರು ಕಛೇರಿಗಳಲ್ಲಿ ಇನ್ಮುಂದೆ ಜೀನ್ಸ್ ಮತ್ತು ಟಿ-ಶರ್ಟ್ ಧರಿಸಬಾರದು. ಒಂದು ವೇಳೆ ಧರಿಸಿದರೆ ಅಂತವರ ವಿರುದ್ಧ ಆಡಳಿತಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಪ್ರದೇಶದ ಭದೋಹಿಯ ಜಿಲ್ಲಾಧಿಕಾರಿಗಳು ಹೊರಡಿಸಿದ ಹೊಸ ನಿರ್ದೇಶನದಲ್ಲಿ ತಿಳಿಸಿದ್ದಾರೆ.
ಸರ್ಕಾರೀ ನೌಕರರು ತಮ್ಮ ಕಚೇರಿಗಳಿಗೆ ಜೀನ್ಸ್ ಮತ್ತು ಟೀ ಶರ್ಟ್ ಗಳಲ್ಲಿ ಬರುತ್ತಿದ್ದಾರೆ. ಇದು ಸ್ವೀಕಾರಾರ್ಹವಲ್ಲ ಎಂದು ಡಿಎಂ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಈ ಆದೇಶದ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಕೊನೆಯ ಎಚ್ಚರಿಕೆ ನೀಡಿದ್ದಾರೆ. ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆಯೇ ಎಂದು ಪರಿಶೀಲಿಸಲು ಹಿರಿಯ ಅಧಿಕಾರಿಗಳ ತಂಡಗಳು ಸರ್ಕಾರೀ ಕಚೇರಿಗಳಿಗೆ ಭೇಟಿ ನೀಡಲಿವೆ ಎಂದು ಡ್ರೆಸ್ ಕೋಡ್ ಸೂಚನೆಯಲ್ಲಿ ತಿಳಿಸಲಾಗಿದೆ.
ಭದೋಹಿಯ ಜಿಲ್ಲಾ ಮ್ಯಾಜಿಸ್ಟ್ರೇಟ್, ಆರ್ಯಕ ಅಗೌರಿ ಹೊರಡಿಸಿದ ಜೀನ್ಸ್ ಮತ್ತು ಟಿ-ಶರ್ಟ್ ಗಳ ಮೇಲಿನ ನಿಷೇಧವು ಜಿಲ್ಲೆಯ ಸರ್ಕಾರಿ ಶಾಲೆಗಳ ಶಿಕ್ಷಕರಿಗೂ ಅನ್ವಯಿಸುತ್ತದೆ ಎಂದು ಕೂಡಾ ಹೇಳಿದ್ದಾರೆ.