ಬಾಗಲಕೋಟೆ: ಇಟಲಿಯ ಪಡುವಾ ವಿಶ್ವವಿದ್ಯಾಲಯದಲ್ಲಿ ‘ಸುಸ್ಥಿರ ಕೃಷಿ’ ವಿಷಯದಲ್ಲಿ ಸ್ನಾತಕೋತ್ತರ ಪದವಿ (ಎಂಎಸ್ಸಿ) ಅಧ್ಯಯನಕ್ಕೆ ಸೀಟ್ ಸಿಕ್ಕಿದೆ. ಅಲ್ಲಿ ಕಲಿಯಲು 15ರಿಂದ 20 ಲಕ್ಷ ಖರ್ಚಾಗುತ್ತದೆ. ಊರಲ್ಲಿರುವ ಕೃಷಿ ಭೂಮಿ ಅಡವಿಟ್ಟುಕೊಂಡು ಶಿಕ್ಷಣ ಸಾಲ ನೀಡಲು ಬ್ಯಾಂಕ್ ನವರು ಒಪ್ಪುತ್ತಿಲ್ಲ ಎಂದು ಇಲ್ಲಿನ ವಿ.ವಿ. ಯ11ನೇ ಘಟಿಕೋತ್ಸವದಲ್ಲಿ ಬಿಎಸ್ಸಿ ತೋಟಗಾರಿಕೆ ಪದವಿಯಲ್ಲಿ 16 ಚಿನ್ನದ ಪದಕಗಳನ್ನು ಗೆದ್ದ ಉಮ್ಮೇಸಾರಾ ತಮ್ಮ ಅಳಲು ತೋಡಿಕೊಂಡಿದ್ದಾರೆ.
‘ಪಡುವಾ (Padua) ವಿಶ್ವವಿದ್ಯಾಲಯಕ್ಕೆ ಜಾಗತಿಕ ಮಟ್ಟದಲ್ಲಿ ಉತ್ತಮ ಹೆಸರು ಇದೆ. ಆನ್ ಲೈನ್ ಮೂಲಕ ಪ್ರವೇಶ ಪರೀಕ್ಷೆ ಬರೆದು ಸೀಟ್ ಪಡೆದಿರುವೆ. ಅಲ್ಲಿ ಕಲಿಯುವುದು ಬದುಕಿನ ಕನಸು. ಯಾರಾದರು ನೆರವು ನೀಡಿದಲ್ಲಿ ಅಲ್ಲಿ ಕಲಿಯಲು ಮುಂದಾಗುವೆ’ ಎಂದು ಉಮ್ಮೇಸಾರಾ ಹೇಳಿದರು.
‘ಶಿರಸಿಯ ತೋಟಗಾರಿಕೆ ಕಾಲೇಜಿನಲ್ಲಿ ಮಗಳು ಬಿಎಸ್ಸಿ ಕಲಿತಿದ್ದು, ಅಲ್ಲಿ ಕಲಿಸಲು ಊರಿನ ಕೆನರಾ ಬ್ಯಾಂಕ್ ನಲ್ಲಿ 1 ಲಕ್ಷ ಸಾಲ ಪಡೆದಿದ್ದೆವು’ಎಂದು ಅಮ್ಮ ರಹೀಮಾ ಬಾನು ಹೇಳಿದರು.
ಸಂಶೋಧನೆಯಲ್ಲಿ ತೊಡಗಿಕೊಳ್ಳುವೆ: ಅಪ್ಪನಿಗೆ ಪಿತ್ರಾರ್ಜಿತವಾಗಿ ಬಂದಿರುವ ಜಮೀನಿನಲ್ಲಿ ಪೇರಲ, ಪಪ್ಪಾಯ ತೋಟ ಮಾಡುವುದು ಹಾಗೂ ಸಂಶೋಧನೆಯಲ್ಲಿ ತೊಡಗಿಸಿಕೊಂಡು ವಿಜ್ಞಾನಿಯಾಗುವುದು ಬದುಕಿನ ಗುರಿ ಎಂದು ಎಂಎಸ್ಸಿ ತೋಟಗಾರಿಕೆ ಹಣ್ಣು ವಿಜ್ಞಾನ ವಿಷಯದಲ್ಲಿ ನಾಲ್ಕು ಚಿನ್ನದ ಪದಕ ಪಡೆದ ಮೇಘಾ ಅರುಣ್ ಹೇಳಿದರು.
ಬೆಂಗಳೂರಿನ ತೋಟಗಾರಿಕೆ ಕಾಲೇಜಿನಲ್ಲಿ ಕಲಿತಿರುವ ಮೇಘಾ, ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಶಿಷ್ಯವೇತನ ಪಡೆದು ಪಪ್ಪಾಯ ಗಿಡಕ್ಕೆ ವೈರಸ್ ಬಾಧೆಯ ಬಗ್ಗೆ ಸಂಶೋಧನೆ ಕೈಗೊಂಡಿದ್ದಾರೆ.