ಬೆಂಗಳೂರು: ಮರಳು ಮಾಫಿಯಾ ತಡೆಗಟ್ಟುವ ಸ್ಕ್ವಾಡಿನ ಸದಸ್ಯರಾಗಿದ್ದ ಕಾನ್‍ಸ್ಟೆಬಲ್ ಹತ್ಯೆಯಾಗಿದೆ. ಸಾವಿರಾರು ಟನ್ ಮರಳು ಕದ್ದು ಸಾಗಿಸುವುದಕ್ಕೆ ತಡೆಯೊಡ್ಡಿದ್ದ ಅವರ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಇದು ಖಂಡನೀಯ ಎಂದು ರಾಜ್ಯದ ಮಾಜಿ ಸಚಿವ ಆರ್.ಅಶೋಕ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್‍ಪಿ ಕಣ್ಣೀರು ಹಾಕಿ ಅಸಹಾಯಕತೆ ತೋರಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಈ ಥರ ಗೂಂಡಾಗಿರಿ ಹೆಚ್ಚುತ್ತಿದೆ. ಬಹಳ ದಿನಗಳಿಂದ ಗೂಂಡಾಗಿರಿ ಸ್ಥಗಿತವಾಗಿತ್ತು. ಮತ್ತೆ ಅದು ಆರಂಭವಾಗಿದೆ ಎಂದು ಆಕ್ಷೇಪಿಸಿದರು.
ಡಿ.ಕೆ.ಶಿವಕುಮಾರ್ ಅವರು ಈ ಹಿಂದೆಯೇ ಪೊಲೀಸರು ಹುಷಾರಾಗಿರಿ ಎಂದು ಹೇಳಿಕೆ ಕೊಟ್ಟಿದ್ದರು. ಈ ಘಟನೆಗಳನ್ನು ಗಮನಿಸಿದರೆ ಮತ್ತೆ ಕರ್ನಾಟಕದಲ್ಲಿ ಗೂಂಡಾಗಿರಿ ಪರ್ವ ಆರಂಭವಾಗಿದೆ ಎಂದು ಸ್ಪಷ್ಟಗೊಂಡಿದೆ ಎಂದು ತಿಳಿಸಿದರು.
ಸರ್ಕಾರ ಮತ್ತು ಪೊಲೀಸ್ ಅಧಿಕಾರಿಗಳು ಇದರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ನಿಷ್ಠಾವಂತ ಪೊಲೀಸ್ ಅಧಿಕಾರಿಗಳು ಕೈಚೆಲ್ಲಿ ಕುಳಿತರೆ ಸರ್ಕಾರ ನಡೆಸುವುದು ಕಷ್ಟವಾಗುತ್ತದೆ. ಕೂಡಲೇ ದಂಧೆಕೋರರನ್ನು ಬಂಧಿಸಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೂಂಡಾಗಿರಿ ಹೆಚ್ಚಾಗುವುದು ಪ್ರತೀತಿ ಎಂದು ಅಶೋಕ್ ಹೇಳಿದ್ದಾರೆ.