ನವದೆಹಲಿ: ವಿಶ್ವದ ಅತ್ಯಂತ ಜನಪ್ರಿಯ ಸರ್ಚ್ ಇಂಜಿನ್ ಗೂಗಲ್, 100 ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಟೆಕ್ಸ್ಟ್ ಮತ್ತು ವಾಯ್ಸ್ ಇಂಟರ್ನೆಟ್ ಹುಡುಕಾಟವನ್ನು ಲಭ್ಯವಾಗುವಂತೆ ಮಾಡಲು ಕೆಲಸ ಮಾಡುತ್ತಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.
ಭಾರತಕ್ಕೆ ಭೇಟಿ ನೀಡುತ್ತಿರುವ ಸುಂದರ್ ಪಿಚೈ, ದೇಶದಲ್ಲಿ ತಾಂತ್ರಿಕ ಬದಲಾವಣೆಯ ವೇಗವು ಅಸಾಧಾರಣವಾಗಿದೆ ಮತ್ತು ಗೂಗಲ್ ಸಣ್ಣ ಉದ್ಯಮಗಳು ಮತ್ತು ಸ್ಟಾರ್ಟ್ಅಪ್ಗಳನ್ನು ಬೆಂಬಲಿಸುತ್ತಿದೆ, ಸೈಬರ್ ಭದ್ರತೆಯಲ್ಲಿ ಹೂಡಿಕೆ ಮಾಡುತ್ತಿದೆ, ಶಿಕ್ಷಣ ಮತ್ತು ಕೌಶಲ್ಯ ತರಬೇತಿಯನ್ನು ಒದಗಿಸುತ್ತದೆ ಮತ್ತು ಕೃಷಿ ಮತ್ತು ಆರೋಗ್ಯ ರಕ್ಷಣೆಯಂತಹ ಕ್ಷೇತ್ರಗಳಲ್ಲಿ ಎಐ (ಕೃತಕ ಬುದ್ಧಿಮತ್ತೆ) ಅನ್ನು ಅನ್ವಯಿಸುತ್ತಿದೆ ಎಂದು ಹೇಳಿದರು.
ಭಾಷಾ ಅನುವಾದ ಮತ್ತು ಸರ್ಚ್ ತಂತ್ರಜ್ಞಾನವನ್ನು ಗೂಗಲ್ನಲ್ಲಿ ಇನ್ನಷ್ಟು ಅಭಿವೃದ್ಧಿಗೊಳಿಸುವ ಉದ್ದೇಶದಿಂದ ದೇಶದ 773 ಜಿಲ್ಲೆಗಳಿಂದ ಮಾತಿನ ಡೇಟಾಗಳನ್ನು ಸಂಗ್ರಹಿಸಲು ನಿರ್ಧರಿಸಲಾಗಿದೆ. ಈ ಯೋಜನೆಯಲ್ಲಿ ಬೆಂಗಳೂರಿನ ಐಐಎಸ್ಸಿ ಜತೆ ಸಹಭಾಗಿತ್ವ ಹೊಂದಲಾಗಿದೆ ಎಂದು ಗೂಗಲ್ ತಿಳಿಸಿದೆ.