ಮೈಸೂರು: ಸರ್ಕಾರಿ ಆಸ್ಪತ್ರೆಗಳು ಅವ್ಯವಸ್ಥೆಯ ಆಗರವಾಗಿದ್ದು ಅಲ್ಲಿಗೆ ಹೋಗುವುದು ಮತ್ತು ಆತ್ಮಹತ್ಯೆ ಮಾಡಿಕೊಳ್ಳುವುದು ಎರಡು ಒಂದೇ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವ ಡಿ. ಸುಧಾಕರ್ ತಕ್ಷಣ ರಾಜೀನಾಮೆ ಕೊಟ್ಟು ಜನರ ಜೀವ ಉಳಿಸುವ ಪುಣ್ಯ ಕಟ್ಟಿಕೊಳ್ಳಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿದ್ದಾರೆ.
ತುಮಕೂರಿನ ನಡೆದ ತಾಯಿ. ಅವಳಿ ಮಕ್ಕಳ ತ್ರಿವಳಿ ಸಾವಿನ ಕುರಿತಂತೆ ಮಾತಾಡಿದ ಅಬ್ದುಲ್ ಮಜೀದ್, ಮೊನ್ನೆ ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ತಾಯಿ ಕಾರ್ಡ್ ಮತ್ತು ಆಧಾರ್ ಕಾರ್ಡ್ ಇಲ್ಲದ ಕಾರಣಕ್ಕೆ ಗರ್ಭಿಣಿಯೊಬ್ಬರಿಗೆ ಚಿಕಿತ್ಸೆ ನಿರಾಕರಿಸಲಾಯಿತು. ಚಿಕಿತ್ಸೆ ಸಿಗದೆ ಆಕೆ ಮತ್ತು ಆಕೆಯ ಹೊಟ್ಟೆಯಲ್ಲಿದ್ದ ಅವಳಿ ಶಿಶುಗಳು ಸತ್ತೇ ಹೋದವು. ನಿನ್ನೆ ಅದೇ ತುಮಕೂರಿನ ಇಂದಿರಾ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ಕು ವರ್ಷದ ಮಗುವೊಂದು ವೈದ್ಯರ ನಿರ್ಲಕ್ಷಕ್ಕೆ ಜೀವ ಬಿಟ್ಟಿದೆ. ಈ ಸರ್ಕಾರದಂತೆಯೇ ಸರ್ಕಾರಿ ಆಸ್ಪತ್ರೆಗಳ ಸಿಬ್ಬಂದಿ ಮತ್ತು ವೈದ್ಯರು ಕೂಡ ಮಾನವೀಯತೆಯನ್ನೇ ಮರೆತು ಕೇವಲ ಭ್ರಷ್ಟಾಚಾರದಲ್ಲಿ ಮುಳುಗಿದ್ದು ತಮ್ಮ ಮೂಲ ಕರ್ತವ್ಯವನ್ನೇ ಮರೆತಿದ್ದಾರೆ ಎಂಬುದು ಈ ಘಟನೆಗಳಿಂದ ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ, ದಿನದಿಂದ ದಿನಕ್ಕೆ ಹದಗೆಡುತ್ತಲೇ ಹೋಗುತ್ತಿದೆ. ಅದರಲ್ಲೂ ಕೋವಿಡ್ ಸಂಧರ್ಭದಲ್ಲಿ ಚಾಮರಾಜನಗರದಲ್ಲಿ ಆಕ್ಸಿಜನ್ ಪೂರೈಕೆಯ ಸ್ಥಗಿತದ ಕಾರಣಕ್ಕೆ ಸುಮಾರು 37 ಕ್ಕೂ ಹೆಚ್ಚು ಮಂದಿ ಜೀವ ಬಿಟ್ಟ ನಂತರ ನಿರಂತರವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ಲಕ್ಷ್ಯದ ಕಾರಣಕ್ಕೆ ಅಮಾಯಕರು ಬಲಿಯಾಗುತ್ತಲೇ ಇದ್ದಾರೆ. ಇತ್ತೀಚೆಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಮೂರು ರೋಗಿಗಳು ಆಕ್ಸಿಜನ್ ಕೊರತೆಯ ಕಾರಣಕ್ಕೆ ಜೀವ ಬಿಡಬೇಕಾಯಿತು. ಇಷ್ಟೆಲ್ಲಾ ಆದರೂ ಕೂಡ ಸರ್ಕಾರ ಈ ಬಗ್ಗೆ ಕಿಂಚಿತ್ತೂ ಗಮನಹರಿಸುವ ಪ್ರಯತ್ನ ಮಾಡುತ್ತಿಲ್ಲ. ತನಗೆ 40% ಕಮಿಷನ್ ಬಂದರೆ ಸಾಕು, ಯಾರು ಸತ್ತರೆ ನಮಗೇನು ಅನ್ನುವ ಮನಸ್ಥಿತಿಗೆ ಈ ಸರ್ಕಾರ ಜಾರಿದೆ. ಏಕೆಂದರೆ ಸಾಯುವವರು ಬಡವರು ಮತ್ತು ಅಮಾಯಕ ಜನ. ಜೀವವಿರೋಧಿ ಮನಸ್ಥಿತಿಯ ಬಿಜೆಪಿಗೆ ಅದು ಕಿಂಚಿತ್ತೂ ಕಾಡುವುದಿಲ್ಲ ಎಂದು ಮಜೀದ್ ಅವರು ಕಿಡಿಕಾರಿದರು.
ಆರೋಗ್ಯ ಖಾತೆ ಎನ್ನುವುದು ತುಂಬಾ ಜವಾಬ್ದಾರಿಯುತ ಮತ್ತು ಶಿಸ್ತಿನಿಂದ ಕೂಡಿರಬೇಕಾದ ಇಲಾಖೆ. ಸೆಪ್ಟಂಬರ್ ತಿಂಗಳಿನಲ್ಲಿ ಪೋರ್ಚುಗಲ್ ದೇಶದಲ್ಲಿ ಭಾರತೀಯ ಮೂಲದ ಗರ್ಭಿಣಿಯ ಸಾವಿನ ಕಾರಣಕ್ಕೆ ಅಲ್ಲಿನ ಆರೋಗ್ಯ ಮಂತ್ರಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದರು. ಜಗತ್ತಿನ ಎಲ್ಲ ದೇಶಗಳು ಜನರ ಆರೋಗ್ಯದ ಬಗ್ಗೆ ಇಷ್ಟು ಗಂಭೀರವಾಗಿ ಇರಬೇಕಾದರೆ ನಮ್ಮಲ್ಲಿ ಮಾತ್ರ ಅದನ್ನು ಕೇವಲ ಲೂಟಿ ಮಾಡುವ ಕೇಂದ್ರಗಳಾಗಿ ಉಪಯೋಗಿಸಲಾಗುತ್ತದೆ. ಇದು ನಮ್ಮ ದೇಶದ ದುರಂತ ಎಂದು ಮಜೀದ್ ತಿಳಿಸಿದರು.
ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ತಕ್ಷಣ ಈ ವ್ಯವಸ್ಥೆಯನ್ನು ಸರಿಪಡಿಸಲು ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಇದೆಲ್ಲಕ್ಕೂ ಮುಖ್ಯ ಜವಾಬ್ದಾರರಾದ ಆರೋಗ್ಯ ಮಂತ್ರಿ ಸುಧಾಕರ್ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿ ಸಮರ್ಥರನ್ನು ಆ ಸ್ಥಾನಕ್ಕೆ ನೇಮಿಸಬೇಕು ಎಂದು ಮಜೀದ್ ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.