ಹೊಸದಿಲ್ಲಿ: 2002ರ ಗೋದ್ರಾ ರೈಲು ಬೋಗಿ ಸುಟ್ಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಯೊಬ್ಬನಿಗೆ ಸುಪ್ರೀಂ ಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ.
ದೀರ್ಘಾವಧಿಯಿಂದ ಜೈಲಿನಲ್ಲಿರುವುದನ್ನು ಗಮನಿಸಿ ಜಾಮೀನು ಮಂಜೂರು ಮಾಡಬೇಕು ಎಂಬ ಅಪರಾಧಿ ಫಾರೂಕ್ ಪರ ವಕೀಲರ ಮನವಿಯನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ. ಎಸ್. ನರಸಿಂಹ ಅವರನ್ನೊಳಗೊಂಡ ಪೀಠವು ಈ ನಿರ್ಧಾರ ಪ್ರಕಟಿಸಿತು.
ಗುಜರಾತ್ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಇದು ಅತ್ಯಂತ ಘೋರ ಅಪರಾಧ. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 59 ಜನರನ್ನು ಸಜೀವ ದಹನ ಮಾಡಲಾಗಿತ್ತು’ ಎಂದು ತಿಳಿಸಿದರು.
ಸಾಬರಮತಿ ಎಕ್ಸ್ ಪ್ರೆಸ್ ನ ಬೋಗಿಗಳಿಗೆ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ಫಾರೂಕ್ ಮತ್ತು ಇತರ ಹಲವರಿಗೆ ಶಿಕ್ಷೆ ವಿಧಿಸಲಾಗಿತ್ತು.
2002ರ ಫೆಬ್ರವರಿ 27ರಂದು, ಗೋದ್ರಾದಲ್ಲಿ ಸಾಬರಮತಿ ಎಕ್ಸ್ ಪ್ರೆಸ್ ನ ಎಸ್ -6 ಬೋಗಿಗೆ ಬೆಂಕಿ ಹಚ್ಚಲಾಗಿತ್ತು. ಘಟನೆಯಲ್ಲಿ 59 ಜನರು ಮೃತಪಟ್ಟಿದ್ದರು.