ನವದೆಹಲಿ: ಭಾರತೀಯ ಅಧಿಕಾರಿಗಳು ತಕ್ಷಣ ಮತ್ತು ಬೇಷರತ್ತಾಗಿ ಬಂಧಿತ ಖ್ಯಾತ ಪತ್ರಕರ್ತ ಮುಹಮ್ಮದ್ ಝುಬೈರ್ ಅವರನ್ನು ಬಿಡುಗಡೆ ಮಾಡಬೇಕು ಮತ್ತು ಹೆಚ್ಚಿನ ಹಸ್ತಕ್ಷೇಪವಿಲ್ಲದೆ ಪತ್ರಿಕೋದ್ಯಮ ಕೆಲಸವನ್ನು ಮುಂದುವರಿಸಲು ಅವಕಾಶ ನೀಡಬೇಕು” ಎಂದು ವಾಷಿಂಗ್ಟನ್ ಡಿಸಿಯ ಏಷ್ಯಾ ಕಾರ್ಯಕ್ರಮ ಸಂಯೋಜಕ ಸ್ಟೀಪನ್ ಬಟ್ಲರ್ ಆಗ್ರಹಿಸಿದ್ದಾರೆ.
ಪತ್ರಕರ್ತ ಮುಹಮ್ಮದ್ ಝುಬೈರ್ ಅವರ ಬಂಧನ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಮತ್ತೊಂದು ಹೊಡೆತವಾಗಿದ್ದು, ಅಲ್ಲಿ ಸರ್ಕಾರವು ಬಲಪಂಥೀಯ ವಿಷಯಗಳ ಬಗ್ಗೆ ವರದಿ ಮಾಡುವ ಪತ್ರಕರ್ತರಿಗೆ ಪ್ರತಿಕೂಲ ಮತ್ತು ಅಸುರಕ್ಷಿತ ವಾತಾವರಣವನ್ನು ಸೃಷ್ಟಿಸಿದೆ ಎಂದು ಅವರು ತಿಳಿಸಿದರು.
ಬೇಹುಗಾರಿಕೆ ವಿಭಾಗದ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದ ದೆಹಲಿ ಪೊಲೀಸ್ ಅಧಿಕಾರಿಗಳು ಪತ್ರಕರ್ತ ಝುಬೈರ್ ಅವರನ್ನು ವಿಚಾರಣೆಯ ನೆಪದಲ್ಲಿ ಕರೆಸಿದ ಬಳಿಕ ಐಪಿಸಿ ಸೆಕ್ಷನ್ 153 ಎ, 295 ಎ ಅಡಿಯಲ್ಲಿ ಪ್ರಕರಣ ದಾಖಲಿಸಿ ಸೋಮವಾರ ಸಂಜೆ ಬಂಧಿಸಿದ್ದರು.
ಸದ್ಯ ಝುಬೈರ್ ಅವರನ್ನು ಒಂದು ದಿನದ ಮಟ್ಟಿಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದ್ದು, ಇಂದು ಜಾಮೀನು ಕುರಿತ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದೆಂದು ತಿಳಿದು ಬಂದಿದೆ.
ಆಪ್ ನಾಯಕರು, ಪತ್ರಕರ್ತರು, ಮಾನವಹಕ್ಕುಗಳ ಕಾರ್ಯಕರ್ತರು ಮತ್ತು ಸಾವಿರಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಸೇರಿದಂತೆ ಹಲವರು ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ, ಪತ್ರಕರ್ತ ಮುಹಮ್ಮದ್ ಝುಬೈರ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗಹಿಸಿದ್ದಾರೆ.